ಶಿವಮೊಗ್ಗ: ಸಾಗರ ತಾಲೂಕಿನ ಬೇಸೂರು ಗ್ರಾಮದಲ್ಲಿ ಅಣು ವಿದ್ಯುತ್ ಸ್ಥಾವರ ಯೋಜನೆ ಸ್ಥಾಪನೆ ವಿರೋಧಿಸಿ ರಾಷ್ಟ್ರಭಕ್ತರ ಬಳಗ ಮತ್ತು ಪರಿಸರಕ್ಕಾಗಿ ನಾವು ಸಂಘಟನೆಗಳ ಸದಸ್ಯರು ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಪ್ರತಿಭಟನೆ ನಡೆಸಿದರು.
ಪರಿಸರ ಸೂಕ್ಷ್ಮ ಪ್ರದೇಶದಲ್ಲಿ ಇಂತಹ ಅಪಾಯಕಾರಿ ಯೋಜನೆ ಜಾರಿಗೊಳಿಸುವುದು ಅಕ್ಷಮ್ಯ ಅಪರಾಧ. ಯಾವುದೇ ಕಾರಣಕ್ಕೂ ಯೋಜನೆಗೆ ಅವಕಾಶ ನೀಡುವುದಿಲ್ಲ ಎಂದು ಪ್ರತಿಭಟನಾಕಾರರು ಎಚ್ಚರಿಸಿದ್ದಾರೆ.

ಪ್ರತಿಭಟನಾಕಾರರ ಆಗ್ರಹಗಳೇನು?
- ಯುನೆಸ್ಕೋ, ಕಸ್ತೂರಿ ರಂಗನ್ ಮತ್ತು ಮಾಧವ್ ಗಾಡ್ಗೀಳ್ ವರದಿಗಳಲ್ಲಿ ಪಶ್ಚಿಮ ಘಟ್ಟಗಳಲ್ಲಿ ಬೃಹತ್ ಯೋಜನೆಗಳನ್ನು ಕೈಗೊಳ್ಳುವುದು ಅಪಾಯಕಾರಿ ಎಂದು ಸ್ಪಷ್ಟವಾಗಿ ಉಲ್ಲೇಖಿಸಲಾಗಿದೆ. ಈಗಾಗಲೇ ಜಲವಿದ್ಯುತ್ ಯೋಜನೆಗಳಿಂದ ಪಶ್ಚಿಮ ಘಟ್ಟಗಳ ಪರಿಸರ ವ್ಯವಸ್ಥೆಗೆ ಹಾನಿಯಾಗಿದೆ.
- ಅಣು ವಿದ್ಯುತ್ ಸ್ಥಾವರ ಯೋಜನೆ ಜಾರಿಗೊಂಡರೆ ಅಪಾರ ಪ್ರಮಾಣದ ಸಸ್ಯ ಸಂಕುಲ, ಪ್ರಾಣಿ ಸಂಕುಲ ಹಾಗೂ ಜಲ ಮೂಲಗಳ ಮೇಲೆ ಗಂಭೀರ ಪರಿಣಾಮ ಉಂಟಾಗಲಿದೆ.
- ಸೌರಶಕ್ತಿ ಹಾಗೂ ಪವನಶಕ್ತಿ ಮೂಲಕ ಕಡಿಮೆ ವೆಚ್ಚದಲ್ಲಿ ವಿದ್ಯುತ್ ಉತ್ಪಾದನೆ ಮಾಡಲು ಸಾಧ್ಯವಿದೆ. ಅತಿ ದುಬಾರಿ ಹಾಗೂ ಅಪಾಯಕಾರಿಯಾದ ಅಣು ವಿದ್ಯುತ್ ಯೋಜನೆಗೆ ಕೈಹಾಕುವ ಅಗತ್ಯವಿಲ್ಲ. ಈ ಪರ್ಯಾಯ ವಿದ್ಯುತ್ ಯೋಜನೆಗಳಿಗೆ ಸರ್ಕಾರ ಆದ್ಯತೆ ನೀಡಬೇಕು.
- ಅಣು ವಿದ್ಯುತ್ ಯೋಜನೆಗಳು ಪರಿಸರ ಹಾಗೂ ಮಾನವಕುಲಕ್ಕೆ ಅತ್ಯಂತ ಅಪಾಯಕಾರಿ ಎಂಬುದನ್ನು ವಿಶ್ವದ ಅನೇಕ ರಾಷ್ಟ್ರಗಳು ಮನಗಂಡಿವೆ. ಚೆರ್ನೋಬಿಲ್ ಅಣು ವಿದ್ಯುತ್ ಸ್ಥಾವರ ದುರಂತದಂತಹ ಘಟನೆಗಳು ಇದಕ್ಕೆ ಸಾಕ್ಷಿಯಾಗಿವೆ.
ಪ್ರತಿಭಟನೆಯಲ್ಲಿ ಮಾಜಿ ಡಿಸಿಎಂ ಕೆ.ಎಸ್. ಈಶ್ವರಪ್ಪ, ಜಿಪಂ ಮಾಜಿ ಸದಸ್ಯ ಕೆ.ಇ. ಕಾಂತೇಶ್, ಪ್ರಮುಖರಾದ ಶೇಖರ್ ಗೌಳೇರ್, ಪಾಲಿಕೆ ಮಾಜಿ ಮೇಯರ್ ಲತಾ ಗಣೇಶ್, ಮಾಜಿ ಸದಸ್ಯರಾದ ಲಕ್ಷ್ಮಿ ಶಂಕರನಾಯ್ಕ, ಈ. ವಿಶ್ವಾಸ್, ಮೋಹನ್‌ಕುಮಾರ್ ಜಾದವ್ ಮತ್ತಿತರರು ಭಾಗವಹಿಸಿದ್ದರು.
ಶಿವಮೊಗ್ಗ ಜಿಲ್ಲೆಯ ಯಾವುದೇ ಊರಿನ ಸುದ್ದಿಯನ್ನು ವಾಟ್ಸಪ್ ಮಾಡಬಹುದು. ಉಚಿತವಾಗಿ ಪ್ರಕಟಿಸುತ್ತೇವೆ. ವಾಟ್ಸಪ್ ನಂಬರ್: 7411700200
