FINANCE NEWS: ಹರಿದು ಹೋಗದ ಹಾಗೂ ದೀರ್ಘಕಾಲ ಬಾಳಿಕೆ ಬರುವ ಪ್ಲಾಸ್ಟಿಕ್ ನೋಟುಗಳನ್ನು ಚಲಾವಣೆಗೆ ತರಲು ಭಾರತೀಯ ರಿಸರ್ವ್ ಬ್ಯಾಂಕ್ (RBI) ಚಿಂತನೆ ನಡೆಸಿದೆ. ಈ ಮೂಲಕ ದಶಕದ ಹಳೆಯ ಯೋಜನೆಯನ್ನು ಪುನಶ್ಚೇತನಗೊಳಿಸಲು RBI ಮುಂದಾಗಿದೆ.
ಪ್ರಾಯೋಗಿಕವಾಗಿ ₹10, ₹20 ನೋಟುಗಳು
ಆರ್ಬಿಐ ₹10 ಅಥವಾ ₹20 ಮುಖಬೆಲೆಯ ಪ್ಲಾಸ್ಟಿಕ್ ನೋಟುಗಳನ್ನು ಪ್ರಾಯೋಗಿಕವಾಗಿ ಮಾರುಕಟ್ಟೆಗೆ ಬಿಡುಗಡೆ ಮಾಡಲು ಸಿದ್ಧತೆ ನಡೆಸುತ್ತಿದೆ. ಸದ್ಯ ಚಲಾವಣೆಯಲ್ಲಿರುವ ಕಾಗದದ ನೋಟುಗಳಿಗೆ ಹೋಲಿಸಿದರೆ ಪ್ಲಾಸ್ಟಿಕ್ ನೋಟುಗಳು ದೀರ್ಘಕಾಲ ಬಾಳಿಕೆ ಬರುತ್ತವೆ. ಅಲ್ಲದೆ ಇವುಗಳು ಸುಲಭವಾಗಿ ಹರಿದು ಹಾಕಲು ಆಗುವುದಿಲ್ಲ ಎಂಬುದು ಅಧಿಕಾರಿಗಳ ಲೆಕ್ಕಾಚಾರ.

ನೋಟು ಬದಲಾವಣೆ ಖರ್ಚು ತಗ್ಗಲಿದೆ
ದೇಶದಲ್ಲಿ ಪ್ರತಿ ವರ್ಷ ಹಳೆಯ ಮತ್ತು ಕೊಳೆಯಾದ ನೋಟುಗಳನ್ನು ಬದಲಾಯಿಸಲು ಆರ್ಬಿಐ ಭಾರಿ ಮೊತ್ತದ ಹಣ ವ್ಯಯಿಸುತ್ತಿದೆ. ಪ್ಲಾಸ್ಟಿಕ್ ನೋಟುಗಳ ಜಾರಿಯಿಂದ ಮುದ್ರಣ ಮತ್ತು ನಿರ್ವಹಣಾ ವೆಚ್ಚ ಕಡಿತಗೊಳ್ಳಲಿದೆ. ಸದ್ಯ ಭಾರತದಲ್ಲಿ ಯುಪಿಐ ಪಾವತಿಗಳು ಮುಂಚೂಣಿಯಲ್ಲಿದೆ. ಆದರೆ ಮಾರುಕಟ್ಟೆಯಲ್ಲಿ ಚಲಾವಣೆಯಲ್ಲಿರುವ ಒಟ್ಟು ನಗದು ಹಣದ ಮೌಲ್ಯವು ₹42.86 ಟ್ರಿಲಿಯನ್ನಷ್ಟು ದಾಖಲೆಯ ಮಟ್ಟವನ್ನು ತಲುಪಿದೆ.
60ಕ್ಕೂ ಹೆಚ್ಚು ದೇಶಗಳಲ್ಲಿ ಪ್ಲಾಸ್ಟಿಕ್ ನೋಟ್
ನಗದು ನಿರ್ವಹಣೆ ಸುಲಭಗೊಳಿಸಲು ಆಸ್ಟ್ರೇಲಿಯಾ, ಕೆನಡಾ ಮತ್ತು ಯುಕೆ ಸೇರಿದಂತೆ 60ಕ್ಕೂ ಹೆಚ್ಚು ದೇಶಗಳು ಪ್ಲಾಸ್ಟಿಕ್ ನೋಟ್ ಬಳಸುತ್ತಿವೆ. ಇದೇ ಮಾದರಿಯನ್ನು ಭಾರತದಲ್ಲೂ ಅಳವಡಿಸಿಕೊಳ್ಳಲು ಹಿರಿಯ ಅಧಿಕಾರಿಗಳ ಮಟ್ಟದಲ್ಲಿ ಚರ್ಚೆಗಳು ನಡೆಯುತ್ತಿವೆ ಎಂದು ಮಾಧ್ಯಮಗಳು ವರದಿ ಮಾಡಿವೆ.

