ಶಿವಮೊಗ್ಗ: ನಗರದ ಮುಖ್ಯ ರಸ್ತೆಯೊಂದರಲ್ಲಿ ಮ್ಯಾನ್ಹೋಲ್ ಮುಚ್ಚುಳ ಮುರಿದು ಬರೋಬ್ಬರಿ ಅರ್ಧ ತಿಂಗಳು ಕಳೆದಿದ್ದರೂ, ಮಹಾನಗರ ಪಾಲಿಕೆ ಅಧಿಕಾರಿಗಳು ಮಾತ್ರ ಇತ್ತ ಕಣ್ಣು ಹಾಯಿಸುತ್ತಿಲ್ಲ. ಜನರ ಜೀವಕ್ಕೆ ಕುತ್ತು ತರುತ್ತಿರುವ ಈ ಸಮಸ್ಯೆ ಸರಿಪಡಿಸಲು ಪಾಲಿಕೆಗೆ ಇನ್ನೂ ಕಾಲಕೂಡಿ ಬಂದಿಲ್ಲದಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.
ನಗರದ ರೈಲ್ವೆ ನಿಲ್ದಾಣವನ್ನು ಸಂಪರ್ಕಿಸುವ ಪ್ರಮುಖ ರಸ್ತೆಯಾದ ಬಾಲರಾಜ್ ಅರಸ್ ರಸ್ತೆಯ ಮಧ್ಯದಲ್ಲೇ ಈ ಅಪಾಯಕಾರಿ ಮ್ಯಾನ್ಹೋಲ್ ಇದೆ. ಟ್ಯಾಂಕ್ ಮೊಹಲ್ಲಾ ಬಡಾವಣೆಗೆ ತಿರುವು ಪಡೆಯುವ ಆಯಕಟ್ಟಿನ ಸ್ಥಳದಲ್ಲೇ ಮ್ಯಾನ್ ಹೋಲ್ ಮುಚ್ಚುಳ ಮುರಿದಿದೆ. ಕಬ್ಬಿಣದ ರಾಡ್ಗಳು ಮೇಲೆದ್ದಿವೆ.

ವಾಹನ ದಟ್ಟಣೆಯ ರಸ್ತೆ
ಈ ರಸ್ತೆಯಲ್ಲಿ ಹಗಲು-ರಾತ್ರಿ ಎನ್ನದೆ ಸದಾ ವಾಹನ ದಟ್ಟಣೆ ಇರುತ್ತದೆ. ಅಪ್ಪಿತಪ್ಪಿ ಬೈಕ್ ಸವಾರರು ಇದರ ಮೇಲೆ ಚಲಿಸಿದರೆ ಪ್ರಾಣಕ್ಕೆ ಕಂಟಕ ಎದುರಾಗುವ ಸಾಧ್ಯತೆ ಇದೆ. ಇನ್ನು, ಈ ರಸ್ತೆಯ ಅಕ್ಕಪಕ್ಕದಲ್ಲೇ ಸರ್ಕಾರಿ ಕಚೇರಿಗಳು ಹಾಗೂ ಸರ್ಕಾರಿ ನೌಕರರ ವಸತಿಗೃಹಗಳಿವೆ. ದಿನನಿತ್ಯ ಇದೇ ರಸ್ತೆಯಲ್ಲಿ ನೂರಾರು ಅಧಿಕಾರಿಗಳು ಓಡಾಡುತ್ತಿದ್ದರೂ ಯಾರಿಗೂ ಈ ಮರಣಸದೃಶ ಮ್ಯಾನ್ಹೋಲ್ ಕಣ್ಣಿಗೆ ಬಿದ್ದಿಲ್ಲ.
ಸ್ಥಳೀಯರು ಪಾಲಿಕೆ ಅಧಿಕಾರಿಗಳಿಗೆ ಖುದ್ದಾಗಿ ಮಾಹಿತಿ ನೀಡಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. ಕೊನೆಗೆ ಬೇಸತ್ತ ಸಾರ್ವಜನಿಕರೇ ವಾಹನ ಸವಾರರ ರಕ್ಷಣೆಗಾಗಿ ಮ್ಯಾನ್ಹೋಲ್ ಒಳಗೆ ಕೋಲು ನೆಟ್ಟು, ಅದಕ್ಕೆ ಕೆಂಪು ಬಟ್ಟೆ ಕಟ್ಟಿ ಅಲರ್ಟ್ ಮಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಇನ್ನಾದರೂ ಪಾಲಿಕೆ ಎಚ್ಚೆತ್ತುಕೊಂಡು ದುರಸ್ತಿ ಕಾರ್ಯ ಕೈಗೊಳ್ಳಬೇಕಿದೆ.

