ಶಿವಮೊಗ್ಗ: ಹೈಕೋರ್ಟ್ ಸಂಚಾರಿ ಪೀಠ ಸ್ಥಾಪನೆಗೆ ಆಗ್ರಹಿಸಿ ಜಿಲ್ಲಾ ವಕೀಲರ ಸಂಘದ ನೇತೃತ್ವದಲ್ಲಿ ಸಾರ್ವಜನಿಕರು ಮತ್ತು ವಿವಿಧ ಸಂಘಟನೆಗಳ ಪದಾಧಿಕಾರಿಗಳು ನಗರದ ಪ್ರಮುಖ ರಸ್ತೆಗಳಲ್ಲಿ ಬೃಹತ್ ಹಕ್ಕೊತ್ತಾಯ ಮೆರವಣಿಗೆ ನಡೆಸಿದರು. ಕಳೆದ 13 ದಿನಗಳಿಂದ ಜಿಲ್ಲಾ ವಕೀಲರ ಭವನದ ಮುಂಭಾಗ ನಡೆಯುತ್ತಿದ್ದ ಧರಣಿ ಸತ್ಯಾಗ್ರಹದ ಭಾಗವಾಗಿ ಈ ಬೃಹತ್ ಜಾಥಾ ಆಯೋಜಿಸಲಾಗಿತ್ತು.
ಎಲ್ಲೆಲ್ಲಿ ಸಾಗಿತು ಪ್ರತಿಭಟನಾ ಜಾಥಾ?
ನ್ಯಾಯಾಲಯದ ಆವರಣದಿಂದ ಹೊರಟ ಪ್ರತಿಭಟನಾ ಜಾಥಾ ಮಹಾವೀರ ವೃತ್ತ, ಬಸವೇಶ್ವರ ವೃತ್ತ, ಬಿ.ಎಚ್. ರಸ್ತೆ, ಶಿವಪ್ಪನಾಯಕ ವೃತ್ತ, ಅಮೀರ್ ಅಹಮದ್ ವೃತ್ತ, ನೆಹರೂ ರಸ್ತೆ, ಗೋಪಿ ವೃತ್ತ ಹಾಗೂ ಬಾಲರಾಜ್ ಅರಸ್ ರಸ್ತೆ ಮೂಲಕ ಜಿಲ್ಲಾಧಿಕಾರಿ ಕಚೇರಿ ತಲುಪಿತು. ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಪ್ರತಿಭಟನಾ ಸಭೆಯಾಗಿ ನಡೆಸಲಾಯಿತು. ಬಳಿಕ ಜಿಲ್ಲಾಧಿಕಾರಿ ಪ್ರಭುಲಿಂಗ ಕವಳಿಕಟ್ಟಿ ಅವರಿಗೆ ಮನವಿ ಸಲ್ಲಿಸಿ, ಉದ್ದೇಶಿತ ಪೀಠಕ್ಕೆ ಜಾಗ ಗುರುತಿಸಿ ಸರ್ಕಾರಕ್ಕೆ ಶಿಫಾರಸು ಮಾಡುವಂತೆ ಕೋರಲಾಯಿತು.

35ಕ್ಕೂ ಹೆಚ್ಚು ಸಂಘಟನೆಗಳ ಬೆಂಬಲ
ಈ ಹೋರಾಟಕ್ಕೆ ಜಿಲ್ಲೆಯ ವಿವಿಧ ವಲಯಗಳಿಂದ ಬೆಂಬಲ ವ್ಯಕ್ತವಾಗಿದೆ. ಜಾಥಾದಲ್ಲಿ ಪ್ರಮುಖ ಸಂಘಟನೆಗಳು ಭಾಗವಹಿಸಿದ್ದವು. ವಿವಿಧ ತಾಲೂಕುಗಳ ವಕೀಲರ ಸಂಘ, ಜಿಲ್ಲಾ ವಾಣಿಜ್ಯ ಕೈಗಾರಿಕಾ ಸಂಸ್ಥೆ, ನಾಗರಿಕ ಹಿತರಕ್ಷಣಾ ವೇದಿಕೆ, ರೈತ ಸಂಘ, ಸಿಐಟಿಯು, ಎಸ್ಡಿಪಿಐ, ರಾಷ್ಟ್ರಭಕ್ತರ ಬಳಗ, ಜಯ ಕರ್ನಾಟಕ ಜನಪರ ವೇದಿಕೆ, ಜಿಲ್ಲಾ ಮಲೆನಾಡು ಮುದ್ರಕರ ಸಂಘ, ಛಾಯಾಗ್ರಾಹಕರ ಸಂಘ, ಜವಳಿ ವರ್ತಕರ ಮತ್ತು ಬೀದಿಬದಿ ವ್ಯಾಪಾರಸ್ಥರ ಸಂಘ, ಅಖಿಲ ಭಾರತ ವೀರಶೈವ – ಲಿಂಗಾಯತ ಮಹಾಸಭಾ, ಒಕ್ಕಲಿಗರ ಸಂಘ, ಬ್ರಾಹ್ಮಣರ ಸಂಘ, ದಲಿತ ಸಂಘರ್ಷ ಸಮಿತಿ, ಆದಿ ಜಾಂಬವ ಸಂಘ, ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ಮತ್ತು ಪ್ರೆಸ್ ಟ್ರಸ್ಟ್ ಸೇರಿದಂತೆ 35ಕ್ಕೂ ಹೆಚ್ಚು ಒಕ್ಕೂಟಗಳು ಜಾಥಾದಲ್ಲಿ ಪಾಲ್ಗೊಂಡಿದ್ದವು.
ಯಾರೆಲ್ಲ ಏನೆಲ್ಲ ಹೇಳಿದರು?
“ಸರ್ಕಾರ ಹೋರಾಟ ತೀವ್ರಗೊಳ್ಳಲು ಅವಕಾಶ ಕೊಡದೆ ಆದಷ್ಟು ಬೇಗ ಶಿವಮೊಗ್ಗದಲ್ಲೇ ಹೈಕೋರ್ಟ್ ಪೀಠ ಸ್ಥಾಪನೆಯ ಬೇಡಿಕೆಗೆ ಸ್ಪಂದಿಸಬೇಕು.”
– ಡಾ. ಮಲ್ಲಿಕಾರ್ಜುನ ಮುರುಘರಾಜೇಂದ್ರ ಸ್ವಾಮೀಜಿ, ಬೆಕ್ಕಿನಕಲ್ಮಠ
“ಹೆಚ್ಚು ಪ್ರಕರಣಗಳು ಇಲ್ಲಿಯೇ ಇರುವುದರಿಂದ ಮಂಗಳೂರಿನ ಬದಲು ಶಿವಮೊಗ್ಗಕ್ಕೆ ಹೈಕೋರ್ಟ್ ಸಂಚಾರಿ ಪೀಠ ನೀಡಲು ಸರ್ಕಾರ ಮುಂದಾಗಬೇಕು. ಇಲ್ಲದಿದ್ದರೆ ಹೋರಾಟವನ್ನು ಇನ್ನಷ್ಟು ಗಟ್ಟಿಗೊಳಿಸೋಣ.”
– ಡಾ. ಬಸವ ಮರುಳಸಿದ್ಧ ಸ್ವಾಮೀಜಿ, ಬಸವಕೇಂದ್ರ
“ಶಿವಮೊಗ್ಗದಲ್ಲಿ ಹೈಕೋರ್ಟ್ ಸಂಚಾರಿ ಪೀಠವಾದರೆ ಅಕ್ಕಪಕ್ಕದ ಐದು ಜಿಲ್ಲೆಗಳಿಗೂ ಉತ್ತಮ ಸಂಪರ್ಕ ವ್ಯವಸ್ಥೆ ಸಿಗಲಿದೆ. ಪ್ರಕರಣಗಳ ಅಂಕಿ-ಅಂಶದ ದೃಷ್ಟಿಯಿಂದಲೂ ಮಂಗಳೂರಿಗಿಂತ ಶಿವಮೊಗ್ಗವೇ ಸೂಕ್ತ ಸ್ಥಳ.”
– ಅಶೋಕ ಜಿ.ಭಟ್, ಹೈಕೋರ್ಟ್ ಪೀಠ ಹೋರಾಟ ಸಮಿತಿ ಕಾರ್ಯದರ್ಶಿ
“ಶೀಘ್ರದಲ್ಲೇ ನೂತನ ಮುಖ್ಯಮಂತ್ರಿ, ಹೈಕೋರ್ಟ್ ನ್ಯಾಯಮೂರ್ತಿ ಹಾಗೂ ಕೇಂದ್ರ ಕಾನೂನು ಸಚಿವರನ್ನು ಭೇಟಿಯಾಗಿ ಹೈಕೋರ್ಟ್ ಪೀಠದ ಅಗತ್ಯತೆ ಬಗ್ಗೆ ಮನವರಿಕೆ ಮಾಡಲಿದ್ದೇವೆ. ಬೇಡಿಕೆ ಈಡೇರುವವರೆಗೂ ಹೋರಾಟ ನಿಲ್ಲುವುದಿಲ್ಲ.”
– ಕೆ.ಬಸಪ್ಪಗೌಡ, ಗೌರವಾಧ್ಯಕ್ಷ, ಹೈಕೋರ್ಟ್ ಸಂಚಾರಿ ಪೀಠ ಹೋರಾಟ ಸಮಿತಿ
