ಶಿವಮೊಗ್ಗ: ದೇಶದ ರಕ್ಷಣಾ ಸಿದ್ಧತೆಯನ್ನು ಬಲಪಡಿಸುವ ಹಾಗೂ ತುರ್ತು ಪರಿಸ್ಥಿತಿ ಎದುರಿಸುವ ನಿಟ್ಟಿನಲ್ಲಿ ನೆಹರೂ ಕ್ರೀಡಾಂಗಣದಲ್ಲಿ ಜೂನ್ 5ರ ಶುಕ್ರವಾರ ಸಂಜೆ 5 ಗಂಟೆಗೆ ವೈಮಾನಿಕ ದಾಳಿ ಸಂದರ್ಭದ ಸುರಕ್ಷತಾ ಕ್ರಮಗಳ ಅಣಕು ಪ್ರದರ್ಶನ ಆಯೋಜಿಸಲಾಗಿದೆ. ಇದು ಕೇವಲ ಮುನ್ನೆಚ್ಚರಿಕೆ ಮತ್ತು ತರಬೇತಿಯ ಪ್ರದರ್ಶನ. ಸಾರ್ವಜನಿಕರು ಆತಂಕಕ್ಕೊಳಗಾಗಬಾರದು ಎಂದು ಅಪರ ಜಿಲ್ಲಾಧಿಕಾರಿ ಅಭಿಷೇಕ್ ವಿ. ಮತ್ತು ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಕಾರಿಯಪ್ಪ ತಿಳಿಸಿದ್ದಾರೆ.
ಅಣಕು ಪ್ರದರ್ಶನಕ್ಕೆ ಕಾರಣವೇನು?
ಕೇಂದ್ರ ಗೃಹ ಸಚಿವಾಲಯದ ಸೂಚನೆ ಮೇರೆಗೆ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರ, ಪೊಲೀಸ್, ಅಗ್ನಿಶಾಮಕ, ಗೃಹರಕ್ಷಕದಳ, ಮಹಾನಗರ ಪಾಲಿಕೆ ಹಾಗೂ ಆರೋಗ್ಯ ಇಲಾಖೆ ಸೇರಿದಂತೆ ವಿವಿಧ ಇಲಾಖೆಗಳ ಸಮನ್ವಯದೊಂದಿಗೆ ಈ ತಾಲೀಮು ನಡೆಯಲಿದೆ. ಆಕಸ್ಮಿಕ ವಾಯು ದಾಳಿ ಅಥವಾ ತುರ್ತು ಪರಿಸ್ಥಿತಿ ಎದುರಾದಾಗ ಸಾರ್ವಜನಿಕರನ್ನು ಸುರಕ್ಷಿತ ಸ್ಥಳಗಳಿಗೆ ರವಾನಿಸುವುದು, ಗಾಯಾಳುಗಳಿಗೆ ತಕ್ಷಣದ ವೈದ್ಯಕೀಯ ನೆರವು ಒದಗಿಸುವುದು ಮತ್ತು ಇಲಾಖೆಗಳ ಸನ್ನದ್ಧತೆಯನ್ನು ಪ್ರಾಯೋಗಿಕವಾಗಿ ಪರೀಕ್ಷಿಸುವುದು ಇದರ ಮುಖ್ಯ ಉದ್ದೇಶವಾಗಿದೆ.

ಮೊಳಗಲಿದೆ ಸೈರನ್, ಗಾಬರಿ ಬೇಡ
ಅಣಕು ಪ್ರದರ್ಶನದ ಭಾಗವಾಗಿ ವೈಮಾನಿಕ ದಾಳಿಯ ಮುನ್ಸೂಚನೆ ನೀಡುವ 2 ನಿಮಿಷಗಳ ಸೈರನ್ ಮೊಳಗಿಸಲಾಗುವುದು. ಸೈರನ್ ಸದ್ದು ಕೇಳಿ ನಾಗರಿಕರು ಗಾಬರಿಯಾಗಬಾರದು. ತಾಲೀಮಿನ ಸಂದರ್ಭದಲ್ಲಿ ಅಗ್ನಿಶಾಮಕ ದಳ, ಪೊಲೀಸ್ ವಾಹನಗಳು ಹಾಗೂ ಆಂಬುಲೆನ್ಸ್‌ಗಳ ಸಂಚಾರ ಹೆಚ್ಚಿರಲಿದೆ. ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿಸುವ ಪ್ರದರ್ಶನ ಇರಲಿದೆ.
ಇಡೀ ಪ್ರಕ್ರಿಯೆಯನ್ನು ಡ್ರೋನ್ ಮೂಲಕ ವಿಡಿಯೋ ಚಿತ್ರೀಕರಣ ಮಾಡಲಾಗುವುದು. ಸಾರ್ವಜನಿಕರ ಜಾಗೃತಿಗಾಗಿ ಹಮ್ಮಿಕೊಂಡಿರುವ ಅಣಕು ಪ್ರದರ್ಶನವನ್ನು ಸಾರ್ವಜನಿಕರು ಸಹ ಮುಕ್ತವಾಗಿ ವೀಕ್ಷಿಸಬಹುದಾಗಿದೆ ಎಂದು ಅಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.