ಶಿವಮೊಗ್ಗದಲ್ಲಿ ಮುಸ್ಲಿಂ ಸಮುದಾಯದ ಪ್ರತಿಭಟನೆ, ಡಿಸಿಎಂ ಸ್ಥಾನಕ್ಕೆ ಪಟ್ಟು, ಏನಂದ್ರು ಪ್ರತಿಭಟನಾಕಾರರು?

ಶಿವಮೊಗ್ಗ: ಜಮೀರ್ ಅಹಮದ್ ಖಾನ್ ಅವರನ್ನು ಉಪ ಮುಖ್ಯಮಂತ್ರಿಯನ್ನಾಗಿ ನೇಮಿಸಬೇಕೆಂದು ಒತ್ತಾಯಿಸಿ ಮುಸ್ಲಿಂ ಹಕ್ಕುಗಳ ವೇದಿಕೆ ನೇತೃತ್ವದಲ್ಲಿ ಮುಸ್ಲಿಂ ಸಮುದಾಯ ಪ್ರತಿಭಟನೆ ನಡೆಸಿತು. ನಗರದ ಅಮೀರ್‌ ಅಹಮದ್‌ ಸರ್ಕಲ್‌ನಲ್ಲಿ ಪ್ರತಿಭಟನೆ ನಡೆಸಿದ ಮುಸ್ಲಿಂ ಸಮುದಾಯ, ಜಮೀರ್‌ ಅಹಮದ್‌ ಖಾನ್‌ ಪರ ಘೋಷಣೆ ಕೂಗಿದರು.

ಸುದ್ದಿಯ ಮುಂದಿನ ಭಾಗ ಕೆಳಗಿದೆ

ಜಮೀರ್ ಅಹಮದ್ ಅವರು ಕ್ರಿಯಾಶೀಲ, ಜನಪರ ಹಾಗೂ ಜಾತ್ಯತೀತ ಮೌಲ್ಯಗಳನ್ನು ಅಳವಡಿಸಿಕೊಂಡಿರುವ ಪ್ರಭಾವಿ ನಾಯಕ. ಕಾಂಗ್ರೆಸ್ ಪಕ್ಷದ ಸಂಘಟನೆ ಮತ್ತು ಬಲವರ್ಧನೆಗಾಗಿ ದೇಶದ ವಿವಿಧ ರಾಜ್ಯಗಳಲ್ಲಿ ಸಕ್ರಿಯವಾಗಿ ಕೆಲಸ ಮಾಡಿದ್ದಾರೆ. ಜಮೀರ್ ಅಹಮದ್ ಅವರು ಶಾಸಕರಾಗಿ, ಸಚಿವರಾಗಿ ಜನಮನ ಗೆದ್ದಿದ್ದಾರೆ ಎಂದರು.

Shimoga-Muslim-Community-protest-for-DCM-Post-to-Zameer-Ahmed-Khan

ಮುಸ್ಲಿಂ ಸಮುದಾಯ ದಶಕಗಳಿಂದ ಕಾಂಗ್ರೆಸ್ ಪಕ್ಷಕ್ಕೆ ಬೆಂಬಲ ನೀಡುತ್ತಿದೆ. ರಾಜ್ಯದಲ್ಲಿ ನೂತನ ಸರ್ಕಾರ ರಚನೆ ಸಂದರ್ಭ ಜಮೀರ್ ಅಹಮದ್‌ ಖಾನ್‌ ಅವರಿಗೆ ಉಪಮುಖ್ಯಮಂತ್ರಿ ಸ್ಥಾನ ಸಿಗಲಿದೆ ಎಂಬ ನಿರೀಕ್ಷೆ ಇತ್ತು. ಆದರೆ ಆ ನಿರೀಕ್ಷೆ ಈಡೇರಿಲ್ಲ. ಇದು ಸಮುದಾಯದಲ್ಲಿ ತೀವ್ರ ಅಸಮಾಧಾನಕ್ಕೆ ಕಾರಣವಾಗಿದೆ. ಹೀಗಾಗಿ ಕಾಂಗ್ರೆಸ್ ಹೈಕಮಾಂಡ್ ಹಾಗೂ ರಾಜ್ಯ ಸರ್ಕಾರ ತಕ್ಷಣವೇ ಎಚ್ಚೆತ್ತು ಜಮೀರ್ ಅಹಮದ್ ಖಾನ್ ಅವರನ್ನು ಉಪ ಮುಖ್ಯಮಂತ್ರಿಯನ್ನಾಗಿ ನೇಮಿಸಬೇಕು ಎಂದು ಒತ್ತಾಯಿಸಿದರು.  

Shivamogga Live Promotion

ಮುಸ್ಲಿಂ ಸಮುದಾಯದ ಇನ್ನು ಹೆಚ್ಚಿನ ಅರ್ಹ ಶಾಸಕರಿಗೆ ಸಚಿವ ಸಂಪುಟದಲ್ಲಿ ಸೂಕ್ತ ಪ್ರಾತಿನಿಧ್ಯ ನೀಡಬೇಕು. ಒಂದು ವೇಳೆ ಬೇಡಿಕೆ ಈಡೇರಿಸದಿದ್ದಲ್ಲಿ ರಾಜ್ಯಾದ್ಯಂತ ಹೋರಾಟವನ್ನು ತೀವ್ರಗೊಳಿಸುವುದಾಗಿ ಮುಸ್ಲಿಂ ಹಕ್ಕುಗಳ ವೇದಿಕೆ ಎಚ್ಚರಿಕೆ ನೀಡಿದೆ.

ಸಂಘಟನೆಯ ಅಧ್ಯಕ್ಷ ಮುನಾವರ್ ಪಾಷಾ, ಉಪಾಧ್ಯಕ್ಷ ಮೊಹಮ್ಮದ್ ಸಾದಾತ್ ಉಲ್ಲಾ, ಕಾರ್ಯದರ್ಶಿ ಸೈಯದ್ ಮುಜಿಬುಲ್ಲಾ ಹಾಗೂ ಸಮುದಾಯದ ಪ್ರಮುಖರು ಇದ್ದರು.

📍 ನಿಮ್ಮೂರ ಸುದ್ದಿ
ಶಿವಮೊಗ್ಗ ಜಿಲ್ಲೆಯ ಯಾವುದೇ ಊರಿನ ಸುದ್ದಿಯನ್ನು ವಾಟ್ಸಪ್‌ ಮಾಡಬಹುದು. ಉಚಿತವಾಗಿ ಪ್ರಕಟಿಸುತ್ತೇವೆ.