ಬ್ಯಾಂಕ್‌ ನೊಟೀಸ್‌ನಿಂದಾಗಿ ಜಗಳ, ಅಣ್ಣನಿಂದ ಹಲ್ಲೆ, ತಮ್ಮ ಸಾವು, ಸ್ಥಳಕ್ಕೆ ಎಸ್‌ಪಿ ಭೇಟಿ

ಆನಂದಪುರಂ: ಬ್ಯಾಂಕ್ ಸಾಲ ಮರುಪಾವತಿ ನೋಟಿಸ್ ವಿಚಾರವಾಗಿ ಉಂಟಾದ ಜಗಳದಲ್ಲಿ ಅಣ್ಣನಿಂದ ಹಲ್ಲೆಗೊಳಗಾಗಿ ತೀವ್ರವಾಗಿ ಗಾಯಗೊಂಡಿದ್ದ ತಮ್ಮ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾನೆ. ಸಾಗರ ತಅಲೂಕು ಹೊಸೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮದರಸನಿಕೊಪ್ಪ ಗ್ರಾಮದಲ್ಲಿ ನಡೆದಿದೆ.

ಸುದ್ದಿಯ ಮುಂದಿನ ಭಾಗ ಕೆಳಗಿದೆ

ರಾಘವೇಂದ್ರ (39) ಮೃತಪಟ್ಟವರು. ಕನುಮನೆ ಮಹೇಶ್ (49) ಕೊಲೆ ಆರೋಪಿ. ಕೃಷಿ ಅಭಿವೃದ್ಧಿಗಾಗಿ ಬ್ಯಾಂಕ್‌ನಿಂದ ಸಾಲ ಪಡೆದಿದ್ದರು. ಸಾಲ ಮರುಪಾವತಿಗೆ ಸಂಬಂಧಿಸಿದಂತೆ ಕಳೆದ ಮೇ ತಿಂಗಳ ಎರಡನೇ ವಾರ ಅಣ್ಣ ಮಹೇಶ್‌ಗೆ ಬ್ಯಾಂಕ್‌ನಿಂದ ನೋಟಿಸ್ ಬಂದಿತ್ತು.

SP-B-Nikhil-Visit-Anandapura-case-spot.

ನೊಟೀಸ್‌ ವಿಚಾರವಾಗಿ ಮೇ 23ರ ರಾತ್ರಿ ಕಾರ್ಯಕ್ರಮ ಮುಗಿಸಿ ಮನೆಗೆ ನಡೆದು ಬರುತ್ತಿದ್ದ ರಾಘವೇಂದ್ರ ಅವರನ್ನು ಮಹೇಶ್ ಅಡ್ಡಗಟ್ಟಿ ದೊಣ್ಣೆಯಿಂದ ತಲೆ, ಕುತ್ತಿಗೆ ಹಾಗೂ ಬೆನ್ನಿನ ಭಾಗಕ್ಕೆ ಬಲವಾಗಿ ಹಲ್ಲೆ ನಡೆಸಿದ್ದಾನೆ ಎಂದು ಆರೋಪಿಸಲಾಗಿದೆ. ಪರಿಣಾಮ ರಾಘವೇಂದ್ರ ಪ್ರಜ್ಞೆ ತಪ್ಪಿ ಬಿದ್ದಿದ್ದರು.

Shivamogga Live Promotion

ಕುಟುಂಬಸ್ಥರು ಅವರನ್ನು ತಕ್ಷಣ ಆನಂದಪುರಂ ಸಮುದಾಯ ಆರೋಗ್ಯ ಕೇಂದ್ರಕ್ಕೆ ದಾಖಲಿಸಿ ಪ್ರಾಥಮಿಕ ಚಿಕಿತ್ಸೆ ಕೊಡಿಸಿದ್ದರು. ಬಳಿಕ ಹೆಚ್ಚಿನ ಚಿಕಿತ್ಸೆಗೆ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆಗೆ ಸ್ಪಂದಿಸದ ಹಿನ್ನೆಲೆ ಮನೆಗೆ ಕರೆತಂದು ಆರೈಕೆ ಮುಂದುವರಿಸಲಾಗುತ್ತಿತ್ತು. ಆದರೆ ಮಂಗಳವಾರ ರಾಘವೇಂದ್ರ ಮೃತಪಟ್ಟಿದ್ದಾರೆ. ಅಣ್ಣ ಮಹೇಶ್ ನಡೆಸಿದ ಹಲ್ಲೆಯಿಂದಲೇ ರಾಘವೇಂದ್ರ ಮೃತಪಟ್ಟಿದ್ದಾರೆ ಎಂದು ಕುಟುಂಬಸ್ಥರು ಆನಂದ ಪುರಂ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ರಾಘವೇಂದ್ರ ಅವರಿಗೆ ಪತ್ನಿ, ಪುತ್ರಿ, ಪುತ್ರ ಇದ್ದಾರೆ.

ಘಟನಾ ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನಿಖಿಲ್, ಸರ್ಕಲ್ ಇನ್ಸ್ ಪೆಕ್ಟರ್ ಸಂತೋಷ್ ಶೆಟ್ಟಿ, ಆನಂದಪುರಂ ಠಾಣೆ ಪಿಎಸ್‌ಐ ಪ್ರವೀಣ್ ಭೇಟಿ ನೀಡಿದರು.

📍 ನಿಮ್ಮೂರ ಸುದ್ದಿ
ಶಿವಮೊಗ್ಗ ಜಿಲ್ಲೆಯ ಯಾವುದೇ ಊರಿನ ಸುದ್ದಿಯನ್ನು ವಾಟ್ಸಪ್‌ ಮಾಡಬಹುದು. ಉಚಿತವಾಗಿ ಪ್ರಕಟಿಸುತ್ತೇವೆ.