ಶಿವಮೊಗ್ಗ: ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಜೂನ್ 13ರಂದು ಬೆಳಿಗ್ಗೆ 10.30ಕ್ಕೆ ಮಲೆನಾಡು ಕೃಷಿ–ಅರಣ್ಯ ಸಂಘರ್ಷ ಮತ್ತು ಸಾಮರಸ್ಯ ವಿಷಯದ ಕುರಿತು ಕಾರ್ಯಾಗಾರ ಹಮ್ಮಿಕೊಳ್ಳಲಾಗಿದೆ ಎಂದು ಪರಿಸರ ಅಧ್ಯಯನ ಕೇಂದ್ರದ ನಿರ್ದೇಶಕ ಜಿ.ಎಲ್. ಜನಾರ್ದನ್ ತಿಳಿಸಿದ್ದಾರೆ.
ಶಿವಮೊಗ್ಗದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಶಿವಮೊಗ್ಗದ ಪರಿಸರ ಅಧ್ಯಯನ ಕೇಂದ್ರ, ಬೆಂಗಳೂರಿನ ಪೃಥ್ವಿ ಟ್ರಸ್ಟ್, ಮಲೆನಾಡಿನ ರೈತ, ಬುಡಕಟ್ಟು ಹಾಗೂ ಪರಿಸರ ಸಂಘಟನೆಗಳ ಸಹಯೋಗ ಮತ್ತು ರಾಜ್ಯ ನೀತಿ ಮತ್ತು ಯೋಜನಾ ಆಯೋಗದ ಸಹಕಾರದಲ್ಲಿ ಈ ಕಾರ್ಯಕ್ರಮ ನಡೆಯಲಿದೆ. ನಿವೃತ್ತ ಎಸಿಸಿಎಫ್ ಎ.ಎಂ. ಅಣ್ಣಯ್ಯ ಕಾರ್ಯಾಗಾರ ಉದ್ಘಾಟಿಸಿ ಕಿರುಹೊತ್ತಿಗೆ ಬಿಡುಗಡೆ ಮಾಡಲಿದ್ದಾರೆ. ಜಿಲ್ಲಾಧಿಕಾರಿ ಪ್ರಭುಲಿಂಗ ಕವಳಿಕಟ್ಟಿ, ಜಿಪಂ ಸಿಇಒ ಎನ್. ಹೇಮಂತ್ ಪಾಲ್ಗೊಳ್ಳಲಿದ್ದು, ರಾಜ್ಯ ನೀತಿ ಮತ್ತು ಯೋಜನಾ ಆಯೋಗದ ಉಪಾಧ್ಯಕ್ಷ ಬಿ.ಆರ್. ಪಾಟೀಲ್ ಅಧ್ಯಕ್ಷತೆ ವಹಿಸಲಿದ್ದಾರೆ ಎಂದರು.

ರೈತ ಸಂಘದ ಮುಖಂಡ ಕೆ.ಟಿ. ಗಂಗಾಧರ್ ತಾಂತ್ರಿಕ ಗೋಷ್ಠಿ–2ರ ಅಧ್ಯಕ್ಷತೆ ವಹಿಸಲಿದ್ದಾರೆ. ಪರಿಸರ ಹೋರಾಟಗಾರ ಅಖಿಲೇಶ್ ಚಿಪ್ಳಿ, ಪಾಲಿಕೆ ಮಾಜಿ ಸದಸ್ಯ ಬಿ.ಎ. ರಮೇಶ್ ಹೆಗ್ಡೆ, ಕುವೆಂಪು ವಿವಿ ವನ್ಯಜೀವಿ ಸಂರಕ್ಷಣಾ ಅಧ್ಯಯನ ವಿಭಾಗದ ಡಾ. ವಿಜಯಕುಮಾರ್ ವಿವಿಧ ವಿಷಯಗಳ ಕುರಿತು ಮಾತನಾಡಲಿದ್ದಾರೆ ಎಂದರು.

ಮುಂದಿನ ದಾರಿ ವಿಷಯದ ಗೋಷ್ಠಿಯ ಅಧ್ಯಕ್ಷತೆಯನ್ನು ಅಡಿಕೆ ಬೆಳೆಗಾರರ ಸಂಘಟನೆಯ ಪ್ರಮುಖ ಬಿ.ಆರ್. ಜಯಂತ್ ವಹಿಸಲಿದ್ದು, ರೈತ ಮುಖಂಡರಾದ ಹೆಚ್.ಆರ್. ಬಸವರಾಜಪ್ಪ, ರಾಮಣ್ಣ ಹಸಲರು, ಶೈಲೇಂದ್ರ ಬಂದಗದ್ದೆ ಹಾಗೂ ಪೂರ್ಣಿಮಾ ಅಭಿಪ್ರಾಯ ಮಂಡಿಸಲಿದ್ದಾರೆ. ಕೃಷಿ ಆರ್ಥಿಕ ತಜ್ಞ ಡಾ. ಪ್ರಕಾಶ್ ಕಮ್ಮರಡಿ ಗೋಷ್ಠಿ ನಿರ್ವಹಣೆ ಮಾಡಲಿದ್ದಾರೆ ಎಂದು ವಿವರಿಸಿದ್ದಾರೆ.