ಭದ್ರಾವತಿ: ಮನೆಯೊಂದರ ಆವರಣದೊಳಗೆ ವಿಷಪೂರಿತ ಹಾವನ್ನು ಬಿಟ್ಟು ಕೊಲೆಗೆ ಯತ್ನಿಸಿದ ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ. ಘಟನೆಗೆ ಸಂಬಂಧಿಸಿದಂತೆ ಇಬ್ಬರು ಅಪರಿಚಿತ ಯುವಕರ ವಿರುದ್ಧ ಭದ್ರಾವತಿ ನ್ಯೂ ಟೌನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಯುವತಿ ಮನೆ ಮುಂದೆ ಹಾವು ಬಿಟ್ಟರು?
ವರ್ಕ್ ಫ್ರಮ್ ಹೋಮ್ ಹಿನ್ನೆಲೆ ಭದ್ರಾವತಿಯ ತಮ್ಮ ಮನೆಯಲ್ಲಿ ಯುವತಿ ಕೆಲಸ ಮಾಡುತ್ತಿದ್ದರು. ಬೆಳಗ್ಗೆ ಸುಮಾರು 10:55ರ ಹೊತ್ತಿಗೆ ಮನೆಯ ಹೊರಗೆ ಬೈಕ್ ಬಂದು ನಿಂತ ಹಾಗೂ ಕಾಂಪೌಂಡ್ ಗೇಟ್ ತೆರೆಯುವ ಶಬ್ದ ಕೇಳಿಸಿದೆ. ತಕ್ಷಣ ಯುವತಿ ಮನೆಯಿಂದ ಹೊರಗೆ ಬಂದು ನೋಡಿದಾಗ, 20 ರಿಂದ 25 ವರ್ಷ ಪ್ರಾಯದ ಇಬ್ಬರು ಅಪರಿಚಿತ ಯುವಕರು ಕಾಂಪೌಂಡ್ ಒಳಗೆ ಪ್ರವೇಶಿಸಿದ್ದರು ಎಂದು ಆರೋಪಿಸಲಾಗಿದೆ.

ಚೀಲದಲ್ಲಿದ್ದ ಹಾವು ಬಿಟ್ಟರು
ಕಾಂಪೌಂಡ್ ಒಳಗೆ ಬಂದಿದ್ದ ಯುವಕರು ತಾವು ತಂದಿದ್ದ ಚೀಲದಲ್ಲಿದ್ದ ವಿಷಪೂರಿತ ಹಾವನ್ನು ಮನೆಯ ಕಡೆಗೆ ಹೋಗುವಂತೆ ಕಾಂಪೌಂಡ್ ಆವರಣದಲ್ಲಿ ಬಿಟ್ಟಿದ್ದಾರೆ. ಇದನ್ನು ಕಂಡು ಗಾಬರಿಗೊಂಡ ಯುವತಿ ಜೋರಾಗಿ ಕಿರುಚಿಕೊಂಡಾಗ, ಇಬ್ಬರು ಅಪರಿಚಿತರು ತಾವು ತಂದಿದ್ದ ಬೈಕ್ ಹತ್ತಿ ಸ್ಥಳದಿಂದ ಪರಾರಿಯಾಗಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಸಿಸಿಟಿವಿಯಲ್ಲಿ ದೃಶ್ಯ ಸೆರೆ
ಕೆಲಸ ಮುಗಿಸಿ ಮನೆಗೆ ಮರಳಿದ ತಾಯಿಗೆ ಯುವತಿಯು ವಿಷಯ ತಿಳಿಸಿದ್ದಾರೆ. ಮನೆಯ ಸಿಸಿಟಿವಿ ಕ್ಯಾಮೆರಾವನ್ನು ಪರಿಶೀಲಿಸಿದಾಗ ಕೃತ್ಯದ ದೃಶ್ಯ ಸೆರೆಯಾಗಿದೆ. ತನ್ನನ್ನು ಸಾಯಿಸುವ ಉದ್ದೇಶದಿಂದಲೇ ಅಪರಿಚಿತರು ಈ ಕೃತ್ಯ ಎಸಗಿದ್ದಾರೆ ಎಂದು ಯುವತಿ ನೀಡಿದ ದೂರಿನಲ್ಲಿ ತಿಳಿಸಲಾಗಿದೆ. ಭದ್ರಾವತಿ ನ್ಯೂ ಟೌನ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

