ಶಿವಮೊಗ್ಗ: ಪ್ರಧಾನಿ ನರೇಂದ್ರ ಮೋದಿ ಅವರು ದೇಶದಲ್ಲಿಯೇ ದೀರ್ಘಕಾಲದ ಪ್ರಧಾನಿ ಎನ್ನುವ ಹೆಗ್ಗಳಿಕೆಗೆ ಪಾತ್ರವಾದ ಹಿನ್ನೆಲೆ ಬಿಜೆಪಿ ಹಮ್ಮಿಕೊಂಡಿರುವ ಬೂತ್ ವಾಸ್ತವ್ಯ ಕಾರ್ಯಕ್ರಮದ ಭಾಗವಾಗಿ ಶಾಸಕ ಎಸ್.ಎನ್. ಚನ್ನಬಸಪ್ಪ ಅವರು ಇಲ್ಲಿನ ಬೊಮ್ಮನಕಟ್ಟೆ ಬೂತ್ ಅಧ್ಯಕ್ಷೆ ಶಾಂತಮ್ಮ ಅವರ ನಿವಾಸದಲ್ಲಿ ವಾಸ್ತವ್ಯ ಮಾಡಿದರು.
ಬಡಾವಣೆ ನಿವಾಸಿಗಳ ಸಮಸ್ಯೆ ಆಲಿಸಿದರು
ವಾಸ್ತವ್ಯದ ಬಳಿಕ ಜೂನ್ 16ರ ಬೆಳಗ್ಗೆ ಬೊಮ್ಮನಕಟ್ಟೆಯ ಆಶ್ರಯ ಬಡಾವಣೆಯ ವಿವಿಧ ಬ್ಲಾಕ್ಗಳಿಗೆ ಭೇಟಿ ನೀಡಿದ ಶಾಸಕರು, ಸ್ಥಳೀಯರ ಕುಂದುಕೊರತೆಗಳನ್ನು ಆಲಿಸಿದರು. ಈ ಸಂದರ್ಭ ಸಾರ್ವಜನಿಕರು ಕುಡಿಯುವ ನೀರಿನ ತೊಂದರೆ, 24X7 ನೀರಿನ ಸಂಪರ್ಕ ಹಾಗೂ ಒಳಚರಂಡಿ ಅವ್ಯವಸ್ಥೆ ಕುರಿತು ಶಾಸಕರ ಗಮನಕ್ಕೆ ತಂದರು. ತಕ್ಷಣವೇ ಕಾರ್ಯಪ್ರವೃತ್ತರಾಗುವಂತೆ ಶಾಸಕರು ಮಹಾನಗರ ಪಾಲಿಕೆ ಅಧಿಕಾರಿಗಳಿಗೆ ದೂರವಾಣಿ ಮೂಲಕ ಸೂಚನೆ ನೀಡಿದರು.

“ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರವು ಜನಸೇವೆ ಮತ್ತು ಪ್ರಗತಿಯ ಭವ್ಯ 12 ವರ್ಷಗಳನ್ನು ಪೂರೈಸಿರುವುದು ಭಾರತದ ಇತಿಹಾಸದಲ್ಲೇ ಸುವರ್ಣಾಕ್ಷರಗಳಲ್ಲಿ ಬರೆದಿಡುವಂತಹ ಸಂದರ್ಭ. ಸರ್ಕಾರದ ಜನಕಲ್ಯಾಣ ಯೋಜನೆಗಳನ್ನು ಪ್ರತಿ ಮನೆಗೆ ತಲುಪಿಸುವುದೇ ನಮ್ಮ ಸಂಘಟನೆಯ ಮೂಲ ಆಶಯ”
– ಎಸ್.ಎನ್.ಚನ್ನಬಸಪ್ಪ, ಶಾಸಕ
ವಿಶೇಷ ಪೂಜೆ ಮತ್ತು ಸಂವಾದ
ವಾಸ್ತವ್ಯಕ್ಕೂ ಮುನ್ನ ಶಾಸಕರು ವಾರ್ಡ್ ಸಂಖ್ಯೆ 1ರ ಶ್ರೀ ಓಂ ಶಕ್ತಿ ಮತ್ತು ಮುತ್ತು ಮಾರಮ್ಮ ದೇವಸ್ಥಾನಗಳಿಗೆ ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸಿದರು. ನಂತರ ಮೆರವಣಿಗೆ ಮೂಲಕ ವಾಸ್ತವ್ಯದ ಮನೆಗೆ ತೆರಳಿ, ಆಶ್ರಯ ಬಡಾವಣೆಯ ಮಹಿಳಾ ಪ್ರಮುಖರು ಹಾಗೂ ವಿವಿಧ ಯೋಜನೆಗಳ ಫಲಾನುಭವಿಗಳೊಂದಿಗೆ ಸಂವಾದ ನಡೆಸಿದರು. ಬಳಿಕ ಪ್ರಮುಖರಾದ ಮಂಜುನಾಥ್ ಅವರ ನಿವಾಸದಲ್ಲಿ ಕ್ಷೇತ್ರದ ಗಣ್ಯರು ಹಾಗೂ ಪ್ರಮುಖ ಮತದಾರರೊಂದಿಗೆ ಶಿವಮೊಗ್ಗ ನಗರದ ಪ್ರಗತಿ ಹಾಗೂ ಸಂಘಟನೆಯ ಬಲವರ್ಧನೆ ಕುರಿತು ಸಮಾಲೋಚನೆ ನಡೆಸಿದರು.
ಸಂಘಟನಾ ಚರ್ಚೆ
ಅಭಿಯಾನದ ಭಾಗವಾಗಿ ವಾರ್ಡ್ ಸಂಖ್ಯೆ 2ರ ಬೂತ್ ಸಂಖ್ಯೆ 27ರ ಬೂತ್ ಅಧ್ಯಕ್ಷ ಶಿವಶಂಕರ್ ಅವರ ನಿವಾಸಕ್ಕೂ ಭೇಟಿ ನೀಡಿ, ತಳಮಟ್ಟದಲ್ಲಿ ಪಕ್ಷ ಸಂಘಟಿಸುವ ಕುರಿತು ಕಾರ್ಯಕರ್ತರೊಂದಿಗೆ ಚರ್ಚಿಸಿದರು. ಬಳಿಕ ಶಾಂತಮ್ಮ ಅವರ ಕುಟುಂಬದ ಸದಸ್ಯರು ಹಾಗೂ ಕಾರ್ಯಕರ್ತರೊಂದಿಗೆ ಸಹಭೋಜನ ಮಾಡಿದರು. ಅಭಿಯಾನದಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಎನ್.ಕೆ. ಜಗದೀಶ್, ನಗರಾಧ್ಯಕ್ಷ ಮೋಹನ್ ರೆಡ್ಡಿ, ಜಿಲ್ಲಾ ಉಪಾಧ್ಯಕ್ಷ ಜ್ಞಾನೇಶ್ವರ್, ಮುಖಂಡರಾದ ಆಶಾ ಚಂದ್ರಪ್ಪ, ಲಕ್ಷ್ಮೀಕಾಂತ್ ಭಟ್, ಕುಮಾರ್ ಗಾಡಿಕೊಪ್ಪ ಸೇರಿದಂತೆ ಹಲವು ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಪಾಲ್ಗೊಂಡಿದ್ದರು.

