ಶಿವಮೊಗ್ಗ: ನಗರದಲ್ಲಿ ಆಟೋಗಳ ಸಂಖ್ಯೆ ಅಧಿಕವಾಗಿರುವುದರಿಂದ ಹೊಸ ಆಟೋಗಳಿಗೆ ನೀಡುತ್ತಿರುವ ಪರವಾನಗಿ ಪ್ರಕ್ರಿಯೆಯನ್ನು ತಕ್ಷಣವೇ ಸ್ಥಗಿತಗೊಳಿಸಬೇಕು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಶಿವಮೊಗ್ಗ ನಗರ ಆಟೋ ಚಾಲಕರ ಮತ್ತು ಮಾಲೀಕರ ಸಂಘವು ಗುರುವಾರ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿತು.
ನಗರದಲ್ಲಿ ಆಟೋ ಚಾಲಕರು ಹಲವಾರು ಸಮಸ್ಯೆಗಳನ್ನು ಎದುರಿಸುತ್ತಿದ್ದು, ಜಿಲ್ಲಾಡಳಿತವು ತಕ್ಷಣವೇ ಸ್ಪಂದಿಸಿ ಕುಂದುಕೊರತೆಗಳನ್ನು ಬಗೆಹರಿಸಿಕೊಡಬೇಕು ಎಂದು ಸಂಘದ ಪದಾಧಿಕಾರಿಗಳು ಆಗ್ರಹಿಸಿದರು.

ಆ್ಯಪ್ ಆಧಾರಿತ ಸೇವೆ ನಿರ್ಬಂಧಿಸಿ
ನಗರದಲ್ಲಿ ಪ್ರಿಪೇಯ್ಡ್ ಆಟೋ ವ್ಯವಸ್ಥೆಯಲ್ಲಿ ಮರು ಸರ್ವೆ ಮಾಡಬೇಕು ಹಾಗೂ ಶಿವಮೊಗ್ಗ ನಗರ ವ್ಯಾಪ್ತಿಯು ಕಿರಿದಾಗಿರುವುದರಿಂದ ಬೈಕ್ ರ‍್ಯಾಪಿಡೋ ಮತ್ತು ನಮ್ಮ ಯಾತ್ರಿ ಮುಂತಾದ ಆ್ಯಪ್ ಆಧಾರಿತ ಸೇವೆಗಳ ಕಾರ್ಯನಿರ್ವಹಣೆಗೆ ನಿಬಂಧನೆ ವಿಧಿಸಬೇಕು ಎಂದು ಚಾಲಕರು ಒತ್ತಾಯಿಸಿದರು.
ಆಟೋ ಬಾಡಿಗೆ ಹೆಚ್ಚಳಕ್ಕೆ ಒತ್ತಾಯ
ಪ್ರಾಮಾಣಿಕವಾಗಿ ದುಡಿಯುವ ಆಟೋ ಚಾಲಕರಿಗೆ ಸರ್ಕಾರದ ಸೌಲಭ್ಯಗಳನ್ನು ಒದಗಿಸಬೇಕು ಹಾಗೂ ಗ್ಯಾಸ್ ಮತ್ತು ದಿನಬಳಕೆ ವಸ್ತುಗಳ ಬೆಲೆ ಏರಿಕೆಯಾಗಿರುವ ಕಾರಣ ಆಟೋ ಕನಿಷ್ಠ ಬಾಡಿಗೆಯನ್ನು ₹50ಕ್ಕೆ ನಿಗದಿಪಡಿಸಬೇಕು ಎಂದು ಮನವಿಯಲ್ಲಿ ಕೋರಿದ್ದಾರೆ.
ಗ್ಯಾಸ್ ಬಂಕ್‌ಗಳಲ್ಲಿ ಒಂದೇ ರೀತಿಯ ಬೆಲೆ ಇಲ್ಲದಿರುವುದರಿಂದ ಕೆಲವು ಬಂಕ್‌ಗಳಲ್ಲಿ ಅನಧಿಕೃತವಾಗಿ ಅಧಿಕ ಹಣ ಪಡೆಯಲಾಗುತ್ತಿದೆ. ಇದಕ್ಕೆ ತಕ್ಷಣ ಕಡಿವಾಣ ಹಾಕಬೇಕು ಎಂದು ಸಂಘಟನೆಯು ಒತ್ತಾಯಿಸಿದೆ. ಅಲ್ಲದೆ, ರೈಲ್ವೆ ನಿಲ್ದಾಣದ ಆಟೋ ನಿಲ್ದಾಣದ ಹತ್ತಿರ ಪರವಾನಗಿ ಇಲ್ಲದೆ ಸಂಚರಿಸುವ ಸಿಟಿ ಬಸ್‌ಗಳನ್ನು ತಡೆಹಿಡಿಯಬೇಕು ಎಂದು ಮನವಿಯಲ್ಲಿ ಒತ್ತಾಯಿಸಲಾಯಿತು.
ರಸ್ತೆಯ ತುಂಬೆಲ್ಲ ಆಟೋ ನಿಲ್ಲಿಸಿದ್ದರು
ಪ್ರತಿಭಟನೆ ಹಿನ್ನೆಲೆ ಚಾಲಕರು ಶಿವಮೊಗ್ಗ ಜಿಲ್ಲಾಧಿಕಾರಿ ಕಚೇರಿ ಮುಂಭಾಗದ ರಸ್ತೆಯಲ್ಲಿ ಆಟೋಗಳನ್ನು ನಿಲ್ಲಿಸಿದ್ದರು. ಇದರಿಂದಾಗಿ ಈ ಭಾಗದಲ್ಲಿ ವಾಹನ ಸಂಚಾರವಿಲ್ಲದಂತಾಯಿತು. ಪ್ರತಿಭಟನೆಯಲ್ಲಿ ಸಂಘದ ಗೌರವಾಧ್ಯಕ್ಷ ಎ. ಅಹಮದ್, ಸಂಸ್ಥಾಪಕ ಖಜಾಂಚಿ ಅಲ್ಲಾಬಕಾಶ್ ಸೇರಿದಂತೆ ಸಂಘಟನೆಯ ಪ್ರಮುಖರು ಉಪಸ್ಥಿತರಿದ್ದರು.

