ಶಿಕಾರಿಪುರ: ತಾಲೂಕಿನ ತರಲಗಟ್ಟ ಗ್ರಾಮದ ಈಶ್ವರ್ ಲೇಔಟ್ ಮುಂಭಾಗದ ರಸ್ತೆಯಲ್ಲಿ ಬೈಕ್ ನಿಯಂತ್ರಣ ತಪ್ಪಿ ರಸ್ತೆ ಪಕ್ಕದ ಮೋರಿ ಕಟ್ಟೆಗೆ ಡಿಕ್ಕಿ ಹೊಡೆದು ಯುವಕನೊಬ್ಬ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಸುದ್ದಿಯ ಮುಂದಿನ 2 ಪ್ಯಾರಾಗಳು ಕೆಳಗಿವೆ.
ಹರೋಗೊಪ್ಪ ತಾಂಡಾ ನಿವಾಸಿ ಮಂಜುನಾಥ್.ಆರ್ (32) ಮೃತ ದುರ್ದೈವಿ. ಅಡುಗೆ ಕೆಲಸ ಮಾಡುತ್ತಿದ್ದ ಮಂಜುನಾಥ್, ಜೂ.18ರಂದು ಶಿಕಾರಿಪುರಕ್ಕೆ ತಮ್ಮ ಹೀರೋ ಸ್ಪ್ಲೆಂಡರ್ ಪ್ಲಸ್ ಬೈಕ್ನಲ್ಲಿ ಕೆಲಸಕ್ಕೆ ಹೋಗಿದ್ದರು. ಅಂದು ರಾತ್ರಿ ಶಿಕಾರಿಪುರ ಕಡೆಯಿಂದ ಶಿವಮೊಗ್ಗ ಕಡೆಗೆ ಬೈಕ್ ಚಲಾಯಿಸಿಕೊಂಡು ಹೋಗುತ್ತಿದ್ದಾಗ, ತರಲಗಟ್ಟ ಗ್ರಾಮದ ಬಳಿ ಬೈಕ್ ನಿಯಂತ್ರಣ ತಪ್ಪಿ ರಸ್ತೆ ಪಕ್ಕದ ಮೋರಿ ಕಟ್ಟೆಗೆ ಡಿಕ್ಕಿ ಹೊಡೆದಿದೆ.

ಡಿಕ್ಕಿಯ ರಭಸಕ್ಕೆ ಮಂಜುನಾಥ್ ಪಕ್ಕದ ಗುಂಡಿಗೆ ಬಿದ್ದಿದ್ದು, ತಲೆಗೆ ಗಂಭೀರ ಪೆಟ್ಟಾಗಿತ್ತು. ತಕ್ಷಣ ಶಿಕಾರಿಪುರ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ಯಲಾಗಿತು. ಪರೀಕ್ಷಿಸಿದ ವೈದ್ಯರು ಮಂಜುನಾಥ್ ಮೃತಪಟ್ಟಿರುವುದಾಗಿ ಘೋಷಿಸಿದರು. ಘಟನೆ ಸಂಬಂಧ ಶಿಕಾರಿಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
