ಬೆಂಗಳೂರು: ಗ್ರಾಮಾಂತರ ಜಿಲ್ಲೆಯ ಹೊಸಕೋಟೆ ತಾಲೂಕಿನ ಸೊಣ್ಣಹಳ್ಳಿಪುರದಲ್ಲಿರುವ ಕೆನರಾ ಬ್ಯಾಂಕ್ ಗ್ರಾಮೀಣ ಸ್ವಉದ್ಯೋಗ ತರಬೇತಿ ಸಂಸ್ಥೆಯು (ಸಿಬಿಆರ್‌ಎಸ್‌ಇಟಿಐ) ನಿರುದ್ಯೋಗಿ ಯುವಕರಿಗಾಗಿ 30 ದಿನಗಳ ದ್ವಿಚಕ್ರ ವಾಹನ ರಿಪೇರಿ ಮತ್ತು ಸರ್ವೀಸಿಂಗ್ ತರಬೇತಿ ಉಚಿತ ಶಿಬಿರವನ್ನು ಆಯೋಜಿಸಿದೆ. ಜುಲೈ 6ರಿಂದ ಆರಂಭವಾಗಲಿರುವ ಶಿಬಿರದಲ್ಲಿ ಇಂಧನ ಹಾಗೂ ವಿದ್ಯುತ್ ಚಾಲಿತ (ಇವಿ) ದ್ವಿಚಕ್ರ ವಾಹನಗಳ ರಿಪೇರಿ ಬಗ್ಗೆ ಉಚಿತವಾಗಿ ತರಬೇತಿ ನೀಡಲಾಗುವುದು. ಸುದ್ದಿಯ ಮುಂದಿನ 3 ಪ್ಯಾರಾಗಳು ಕೆಳಗಿವೆ.
ಸ್ವಯಂ ಉದ್ಯೋಗಿಗಳಾಗಲು ಬಯಸುವ 18ರಿಂದ 50 ವರ್ಷ ವಯಸ್ಸಿನ ಕರ್ನಾಟಕದ ಯಾವುದೇ ಜಿಲ್ಲೆಯ ನಿರುದ್ಯೋಗಿ ಪುರುಷರು ಈ ಶಿಬಿರದಲ್ಲಿ ಪಾಲ್ಗೊಳ್ಳಬಹುದು. ಆಯ್ಕೆಯಾದ ಶಿಬಿರಾರ್ಥಿಗಳಿಗೆ ತರಬೇತಿ ಅವಧಿಯಲ್ಲಿ ಉಚಿತ ಊಟ, ವಸತಿ ಹಾಗೂ ತರಬೇತಿ ಸೌಕರ್ಯ ಕಲ್ಪಿಸಲಾಗುವುದು.

ಅರ್ಹತೆಗಳು ಏನೇನು?
ಗ್ರಾಮೀಣ ಭಾಗದ ಬಿಪಿಎಲ್ ಕಾರ್ಡ್ ಹೊಂದಿರುವ ಅಭ್ಯರ್ಥಿಗಳಿಗೆ ಮೊದಲ ಆದ್ಯತೆ ನೀಡಲಾಗುವುದು. ಅಭ್ಯರ್ಥಿಗಳಿಗೆ ಕನ್ನಡ ಓದಲು ಮತ್ತು ಬರೆಯಲು ಕಡ್ಡಾಯವಾಗಿ ತಿಳಿದಿರಬೇಕು. ತರಬೇತಿ ಪೂರ್ಣಗೊಳಿಸಿದವರಿಗೆ ಕೇಂದ್ರ ಸರ್ಕಾರದ ಗ್ರಾಮೀಣ ಸಚಿವಾಲಯದಿಂದ ಪ್ರಮಾಣಪತ್ರ ವಿತರಿಸಲಾಗುವುದು.
ಆಸಕ್ತರು ಜೂನ್ 24ರಂದು ಬೆಳಗ್ಗೆ 10 ಗಂಟೆಗೆ ಬೆಂಗಳೂರಿನ ಹೊಸಕೋಟೆ ತಾಲೂಕಿನ ಸೊಣ್ಣಹಳ್ಳಿಪುರದಲ್ಲಿರುವ ಸಂಸ್ಥೆಯ ಕಚೇರಿಗೆ ನೇರವಾಗಿ ವಿದ್ಯಾರ್ಹತೆ ಮತ್ತು ವಿಳಾಸದ ದಾಖಲಾತಿಗಳೊಂದಿಗೆ ಸಂದರ್ಶನಕ್ಕೆ ಹಾಜರಾಗಬಹುದು. ಸಂದರ್ಶನಕ್ಕೆ ಬರಲು ಸಾಧ್ಯವಾಗದವರು ಜೂನ್ 24ರೊಳಗೆ ಮೊಬೈಲ್ ಸಂಖ್ಯೆಯ 8970476050, 6363139123 ಅಥವಾ 9886935603 ಸಂಖ್ಯೆಗಳನ್ನು ಸಂಪರ್ಕಿಸಿ ಹೆಸರು ನೋಂದಾಯಿಸಿಕೊಳ್ಳಬಹುದು ಎಂದು ಸಂಸ್ಥೆಯ ನಿರ್ದೇಶಕ ರವಿ ಎನ್.ಸಿ. ತಿಳಿಸಿದ್ದಾರೆ.
