ಶಿವಮೊಗ್ಗ: ನಗರದ ವಿದ್ಯಾನಗರ ರೈಲ್ವೆ ಮೇಲ್ಸೇತುವೆಯ (Railway Over Bridge) ಪಕ್ಕದಲ್ಲಿಯೇ ನೂತನವಾಗಿ ನಿರ್ಮಿಸಲು ಉದ್ದೇಶಿಸಿರುವ ರೈಲ್ವೆ ಕೆಳ ಸೇತುವೆ (Limited Height Subway/Underpass) ಕಾಮಗಾರಿಗೆ ಸಂಸದ ಬಿ.ವೈ.ರಾಘವೇಂದ್ರ ಇಂದು ಶಂಕುಸ್ಥಾಪನೆ ನೆರವೇರಿಸಿದರು. ➤ ಸುದ್ದಿಯ ಮುಂದಿನ 4 ಪ್ಯಾರಾಗಳು ಕೆಳಗಿವೆ.
₹5 ಕೋಟಿ ವೆಚ್ಚದಲ್ಲಿ ಅಂಡರ್ಪಾಸ್
ಶಂಕುಸ್ಥಾಪನೆ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಸಂಸದರು, “ಹಿಂದೆ ರಾಷ್ಟ್ರೀಯ ಹೆದ್ದಾರಿ ಇಲಾಖೆಯಿಂದ ₹46 ಕೋಟಿ ವೆಚ್ಚದಲ್ಲಿ ಇಲ್ಲಿ ಮೇಲ್ಸೇತುವೆ ನಿರ್ಮಿಸಲಾಗಿತ್ತು. ಆದರೆ ವಿದ್ಯಾನಗರ, ಚಿಕ್ಕಲ್, ಶಾಂತಮ್ಮ ಲೇಔಟ್ ಹಾಗೂ ಅರಕೇಶ್ವರ ದೇವಸ್ಥಾನ ಭಾಗದ ನಿವಾಸಿಗಳಿಗೆ ಆ ಸೇತುವೆ ಮೂಲಕ ಸಂಚರಿಸಲು ದೂರವಾಗುತ್ತಿತ್ತು. ಈ ಹಿನ್ನೆಲೆ ಶಾಸಕ ಚನ್ನಬಸಪ್ಪ ಹಾಗೂ ಸ್ಥಳೀಯ ಮುಖಂಡರ ಸಲಹೆಯಂತೆ ಕೇಂದ್ರ ಸರ್ಕಾರದಿಂದ ₹5 ಕೋಟಿ ಅನುದಾನ ಪಡೆದು ರೈಲ್ವೆ ಜಾಗದಲ್ಲೇ ಅಂಡರ್ಪಾಸ್ ನಿರ್ಮಿಸಲಾಗುತ್ತಿದೆ” ಎಂದು ತಿಳಿಸಿದರು.

ಒಂದೇ ಜಂಕ್ಷನ್ನಲ್ಲಿ ಎರಡು ಅಂಡರ್ಪಾಸ್
“ಇಲ್ಲಿ ಎರಡು ಪ್ರತ್ಯೇಕ ಅಂಡರ್ಪಾಸ್ಗಳನ್ನು ನಿರ್ಮಿಸಲಾಗುತ್ತಿದ್ದು, ಒಂದು ಅರಣ್ಯ ಇಲಾಖೆಯ ಸಿಸಿಎಫ್ (CCF) ಕಚೇರಿ ಕಡೆಯಿಂದ ಹಾಗೂ ಮತ್ತೊಂದು ಅದರ ಬಲಗಡೆಯಿಂದ ಬರಲಿದ್ದು, ಇವೆರಡೂ ಒಂದೇ ಜಂಕ್ಷನ್ನಲ್ಲಿ ಸೇರಲಿವೆ. ಭವಿಷ್ಯದಲ್ಲಿ ಬೀರೂರು–ಶಿವಮೊಗ್ಗ ರೈಲ್ವೆ ಹಳಿ ದ್ವಿಪಥಗೊಂಡರೂ (Doubling) ತೊಂದರೆ ಆಗದಂತೆ ಇದನ್ನು ವಿನ್ಯಾಸಗೊಳಿಸಲಾಗಿದೆ. ಇಲ್ಲಿ ಬೆಳೆದಿದ್ದ ಅಕೇಷಿಯಾ ಮರಗಳನ್ನು ತೆರವುಗೊಳಿಸಲು ಅನುಮತಿ ಪಡೆಯಲು ಒಂದು ವರ್ಷ ತಗುಲಿದ್ದು, ಇನ್ನು 3 ತಿಂಗಳಲ್ಲಿ ಈ ಕಾಮಗಾರಿ ಪೂರ್ಣಗೊಳ್ಳಲಿದೆ” ಎಂದರು.
ಜಿಲ್ಲೆಯಾದ್ಯಂತ ರೈಲ್ವೆ ಅಂಡರ್ಪಾಸ್ಗಳು
“ಶಿವಮೊಗ್ಗದ ಫ್ರೀಡಂ ಪಾರ್ಕ್ನಿಂದ ಬೊಮ್ಮನಕಟ್ಟೆಗೆ ಸಂಪರ್ಕಿಸುವ ಜಾಗದಲ್ಲಿ ಭೂಸ್ವಾಧೀನ ಸೇರಿದಂತೆ ಒಟ್ಟು ₹70 ಕೋಟಿ ವೆಚ್ಚದಲ್ಲಿ ಕಾಮಗಾರಿ ನಡೆಯಲಿದೆ. ಇದಲ್ಲದೆ ಕುಂಸಿ, ಯಡೆಹಳ್ಳಿ, ಹೊಸೂರು ಹಾಗೂ ತಾಳಗುಪ್ಪದಲ್ಲಿ ₹120 ಕೋಟಿ ವೆಚ್ಚದಲ್ಲಿ ಅಂಡರ್ಪಾಸ್ಗಳನ್ನು ಮಾಡಲಾಗುತ್ತಿದೆ. ಗುಂಡಪ್ಪ ಶೆಡ್ ಬಳಿಯ ಕಾಮಗಾರಿಗೆ ಈಗಾಗಲೇ ಟೆಂಡರ್ ಕರೆಯಲಾಗಿದೆ. ಒಟ್ಟಾರೆ ಜಿಲ್ಲೆಯಲ್ಲಿ ಸುಮಾರು ₹250 ರಿಂದ ₹300 ಕೋಟಿ ವೆಚ್ಚದಲ್ಲಿ ವಿವಿಧ ರೈಲ್ವೆ ಅಂಡರ್ಪಾಸ್ ಕಾಮಗಾರಿಗಳು ನಡೆಯಲಿವೆ” ಎಂದು ಸಂಸದರು ಮಾಹಿತಿ ನೀಡಿದರು.
ಈ ಸಂದರ್ಭ ಶಾಸಕ ಎಸ್.ಎನ್.ಚನ್ನಬಸಪ್ಪ, ವಿಧಾನ ಪರಿಷತ್ ಸದಸ್ಯ ಡಿ.ಎಸ್.ಅರುಣ್, ಪ್ರಮುಖರಾದ ಮೋಹನ್ ರೆಡ್ಡಿ, ಪಾಲಿಕೆ ಮಾಜಿ ಸದಸ್ಯೆ ಯಮುನಾ ರಂಗೇಗೌಡ ಸೇರಿದಂತೆ ಹಲವು ಮುಖಂಡರು ಉಪಸ್ಥಿತರಿದ್ದರು.
