ಭದ್ರಾವತಿ: ರೈಸ್ ಮಿಲ್ಗಳಿಗೆ ತಲುಪಿಸಬೇಕಿದ್ದ ₹4.20 ಲಕ್ಷ ಮೌಲ್ಯದ 300 ಬ್ಯಾಗ್ ಅಕ್ಕಿ ಲೋಡ್ ಸಮೇತ ಐಷರ್ ವಾಹನದ ಚಾಲಕನೊಬ್ಬ ನಾಪತ್ತೆಯಾಗಿದ್ದಾನೆ. ➤ ಸುದ್ದಿಯ ಮುಂದಿನ 3 ಪ್ಯಾರಾಗಳು ಕೆಳಗಿವೆ.
ಭದ್ರಾವತಿ ತಾಲೂಕು ದೊಣಬಘಟ್ಟದ ವ್ಯಾಪಾರಿ ಎನ್.ಮಹಮ್ಮದ್ ಜಾಫರ್ ಅವರು ವಂಚನೆಗೊಳಗಾಗಿದ್ದಾರೆ ಬೆಂಗಳೂರಿನ ಕ್ಯಾಂಟರ್ ವಾಹನದ ಚಾಲಕ ಪ್ರೇಮಕುಮಾರ್ ಎಂಬಾತನ ವಿರುದ್ಧ ಭದ್ರಾವತಿ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಏನಿದು ಪ್ರಕರಣ? ಹೇಗಾಯ್ತು ವಂಚನೆ?
ಮಹಮ್ಮದ್ ಜಾಫರ್ ಅವರು ಮಾಚೇನಹಳ್ಳಿಯ ಭಾರತೀಯ ಆಹಾರ ನಿಗಮದ (FCI) ಹರಾಜಿನಲ್ಲಿ ಅಕ್ಕಿ ಖರೀದಿಸಿದ್ದರು. ಜೂನ್ 3ರಂದು ದೊಣಬಘಟ್ಟದ ಗೋದಾಮಿನಿಂದ ಮಂಡ್ಯದ ತೂಬಿನಕೆರೆ ಗ್ರಾಮದ ಎಂ.ಎನ್. ಆಗ್ರೋ ರೈಸ್ ಮಿಲ್ಗೆ ₹2.80 ಲಕ್ಷ ಮೌಲ್ಯದ 200 ಬ್ಯಾಗ್ ಹಾಗೂ ಟಿ.ನರಸಿಪುರ ತಾಲೂಕಿನ ಬನ್ನೂರಿನ ಶ್ರೀ ಲಕ್ಷ್ಮೀ ವೆಂಕಟೇಶ್ವರ ಮಾಡರ್ನ್ ರೈಸ್ ಮಿಲ್ಗೆ ₹1.40 ಲಕ್ಷ ಮೌಲ್ಯದ 100 ಬ್ಯಾಗ್ ಅಕ್ಕಿಯನ್ನು ಚಾಲಕ ಪ್ರೇಮಕುಮಾರ್ನ ವಾಹನಕ್ಕೆ ಲೋಡ್ ಮಾಡಿ ಕಳುಹಿಸಿದ್ದರು.
ಜೂನ್ 4ರಂದು ಬೆಳಿಗ್ಗೆ ಜಾಫರ್ ಅವರು ಚಾಲಕನಿಗೆ ಕರೆ ಮಾಡಿದಾಗ, ವಾಹನ ಕೆಟ್ಟುಹೋಗಿದ್ದು ರಿಪೇರಿ ಮಾಡಿಸಿಕೊಂಡು ಹೋಗುವುದಾಗಿ ತಿಳಿಸಿದ್ದ. ಆದರೆ ಸಂಜೆ ವೇಳೆಗೆ ಆತನ ಮೊಬೈಲ್ ಸ್ವಿಚ್ ಆಫ್ ಆಗಿತ್ತು. ಅಲ್ಲದೆ ರೈಸ್ ಮಿಲ್ಗಳಿಗೆ ಅಕ್ಕಿ ತಲುಪದ ಹಿನ್ನೆಲೆ ಲಾರಿಗಾಗಿ ಹುಡುಕಾಟ ನಡೆಸಿದ ಮಹಮ್ಮದ್ ಜಾಫರ್ ಕೊನೆಗೆ ಚಾಲಕನ ವಿರುದ್ಧ ದೂರು ನೀಡಿದ್ದಾರೆ.
