ಶಿವಮೊಗ್ಗ: ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ (VTU) 2024-25ನೇ ಸಾಲಿನ ಸಂಸ್ಥೆಗಳ ಕ್ರೀಡಾ ಪ್ರೋತ್ಸಾಹ ಯೋಜನೆಯಡಿ ಶಿವಮೊಗ್ಗದ JNN ಇಂಜಿನಿಯರಿಂಗ್ ಕಾಲೇಜು (JNNCE) ಒಟ್ಟು 505 ಅಂಕಗಳೊಂದಿಗೆ ರಾಜ್ಯಮಟ್ಟದಲ್ಲಿ ದ್ವಿತೀಯ ಸ್ಥಾನ ಪಡೆದಿದೆ. ➤ ಸುದ್ದಿಯ ಮುಂದಿನ 3 ಪ್ಯಾರಾಗಳು ಕೆಳಗಿವೆ.
ಬೆಳಗಾವಿಯ ವಿಟಿಯು ಸೆನೆಟ್ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ಸಾಧಕರ ದಿನ ಕಾರ್ಯಕ್ರಮದಲ್ಲಿ ವಿಟಿಯು ಕುಲಪತಿ ಡಾ.ಎಸ್. ವಿದ್ಯಾಶಂಕರ್ ಅವರು JNNCE ಕಾಲೇಜಿಗೆ ₹1.25 ಲಕ್ಷ ನಗದು ಹಾಗೂ ಪ್ರಶಸ್ತಿ ಫಲಕ ಪ್ರದಾನ ಮಾಡಿದರು. ಸಂಸ್ಥೆಯಲ್ಲಿ ವರ್ಷಪೂರ್ತಿ ಹಮ್ಮಿಕೊಳ್ಳಲಾದ ಕ್ರೀಡಾ ಚಟುವಟಿಕೆಗಳು, ವಿದ್ಯಾರ್ಥಿಗಳ ರಾಜ್ಯ ಮತ್ತು ರಾಷ್ಟ್ರಮಟ್ಟದ ಸಾಧನೆ ಹಾಗೂ ಕ್ರೀಡಾ ಸೌಲಭ್ಯಗಳ ಅಭಿವೃದ್ಧಿ ಪರಿಗಣಿಸಿ ಈ ಗೌರವ ನೀಡಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

‘ರಾಜ್ಯದ ತಾಂತ್ರಿಕ ಶಿಕ್ಷಣ ಸಂಸ್ಥೆಗಳ ನಡುವೆ ಕ್ರೀಡಾ ಕ್ಷೇತ್ರದಲ್ಲಿ JNNCE ತನ್ನ ಛಾಪು ಮೂಡಿಸಿರುವುದಕ್ಕೆ ಈ ಪ್ರಶಸ್ತಿ ಮತ್ತೊಂದು ಸಾಕ್ಷಿಯಾಗಿದೆ. ಕಾಲೇಜಿನ ಕ್ರೀಡಾ ಪರಂಪರೆಗೆ ಹೊಸ ಗರಿಮೆಯನ್ನು ತಂದುಕೊಟ್ಟಿರುವ ಈ ಸಾಧನೆ ವಿದ್ಯಾರ್ಥಿಗಳು, ದೈಹಿಕ ಶಿಕ್ಷಣ ವಿಭಾಗ ಹಾಗೂ ಎನ್ಇಎಸ್ ಆಡಳಿತ ಮಂಡಳಿಯ ಸಮರ್ಪಣಾ ಮನೋಭಾವದ ಪ್ರತಿಫಲವಾಗಿದೆʼ ಎಂದು ಪ್ರಾಂಶುಪಾಲರಾದ ಡಾ. ವೈ. ವಿಜಯಕುಮಾರ್ ಸಂತಸ ವ್ಯಕ್ತಪಡಿಸಿದ್ದಾರೆ.
ಪ್ರಶಸ್ತಿ ಸ್ವೀಕಾರದ ಸಂದರ್ಭದಲ್ಲಿ ವಿಟಿಯು ಕುಲಸಚಿವ ಡಾ.ಪ್ರಸಾದ್ ಬಿ. ರಾಂಪೂರ್, ಕಾಲೇಜಿನ ದೈಹಿಕ ಶಿಕ್ಷಣ ವಿಭಾಗದ ನಿರ್ದೇಶಕ ಎ.ವಿ. ಚೇತನ್ ಮತ್ತಿತರರು ಉಪಸ್ಥಿತರಿದ್ದರು.
