ಶಿವಮೊಗ್ಗ: ದೀವರ ಸಮುದಾಯವನ್ನು ಪರಿಶಿಷ್ಟ ಪಂಗಡಕ್ಕೆ (ಎಸ್.ಟಿ. ವರ್ಗಕ್ಕೆ) ಸೇರ್ಪಡೆಗೊಳಿಸಿ ಮೀಸಲಾತಿ ಕಲ್ಪಿಸಬೇಕು. ಸಮುದಾಯದ ಭಾಷೆಯ ಉಳಿವಿಗಾಗಿ ದೀವರ ಭಾಷಾ ಅಕಾಡೆಮಿ ಸ್ಥಾಪಿಸಬೇಕು ಎಂದು ಒತ್ತಾಯಿಸಿ ದೀವರ ಕ್ಷೇಮಾಭಿವೃದ್ಧಿ ಜಿಲ್ಲಾ ಸಂಘದ ಪದಾಧಿಕಾರಿಗಳು ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು. ➤ ಸುದ್ದಿಯ ಮುಂದಿನ 2 ಪ್ಯಾರಾಗಳು ಕೆಳಗಿವೆ.
ರಾಜ್ಯ ಸರ್ಕಾರದ ಜಾತಿವಾರು ಅಧಿಸೂಚನೆಯಲ್ಲಿ ದೀವರು ಎಂದು ಕರೆಯಲ್ಪಡುವ ಈ ಜನಾಂಗದವರು ಶಿವಮೊಗ್ಗ, ಉತ್ತರಕನ್ನಡ ಮತ್ತು ಚಿಕ್ಕಮಗಳೂರು ಜಿಲ್ಲೆಗಳ ಶಿರಸಿ, ಸಿದ್ದಾಪುರ, ಹೊನ್ನಾವರ, ಭಟ್ಕಳ, ಸೊರಬ, ಶಿಕಾರಿಪುರ, ಸಾಗರ, ಹೊಸನಗರ, ತೀರ್ಥಹಳ್ಳಿ ಹಾಗೂ ಶೃಂಗೇರಿ ತಾಲ್ಲೂಕು ಒಳಗೊಂಡಂತೆ ಮಲೆನಾಡು ಮತ್ತು ಕರಾವಳಿ ಭಾಗದಲ್ಲಿ ನೆಲೆಸಿದ್ದಾರೆ ಎಂದು ಮನವಿಯಲ್ಲಿ ವಿವರಿಸಲಾಗಿದೆ.

ದೀವರ ಸಮುದಾಯವು ಮೂಲತಃ ಕಂಪಿಲರ ಅರಸೊತ್ತಿಗೆ ಹಾಗೂ ಗಂಡುಗಲಿ ಕುಮಾರರಾಮನ ಸೈನ್ಯದಲ್ಲಿ ಬಲಿಷ್ಠ ಸೈನಿಕರಾಗಿ ಹೋರಾಡಿದ ಇತಿಹಾಸ ಹೊಂದಿದ್ದು, ಮೊಘಲರೊಂದಿಗಿನ ಯುದ್ಧಗಳಲ್ಲೂ ಭಾಗಿಯಾದ ಉಲ್ಲೇಖಗಳಿವೆ. ಕಾಲಾಂತರದಲ್ಲಿ ಮಲೆನಾಡಿನ ದಟ್ಟಾರಣ್ಯ, ಗುಡ್ಡಗಾಡು ಪ್ರದೇಶಗಳಲ್ಲಿ ನೆಲೆಸಿ, ಆರಂಭದಲ್ಲಿ ಬೇಟೆ ಹಾಗೂ ನಂತರ ಕೃಷಿಯನ್ನು ಕಸುಬಾಗಿಸಿಕೊಂಡಿದ್ದಾರೆ. ಸಮುದಾಯದ ಜೀವನ ಶೈಲಿ, ಆಹಾರ ಪದ್ಧತಿ, ವಿಶಿಷ್ಟ ಕಲೆ ಮತ್ತು ಸಾಂಸ್ಕೃತಿಕ ಹಿನ್ನೆಲೆಯನ್ನು ಪರಾಂಬರಿಸಿದಾಗ ಇವರು ಗುಡ್ಡಗಾಡು ಜನರ ಸಾಂಸ್ಕೃತಿಕ ಲಕ್ಷಣಗಳನ್ನು ಹೊಂದಿರುವುದು ಸ್ಪಷ್ಟವಾಗುತ್ತದೆ ಎಂದು ಮನವಿಯಲ್ಲಿ ವಿವರಿಸಲಾಗಿದೆ.