ನವದೆಹಲಿ: ಮಹಾರಾಷ್ಟ್ರದಲ್ಲಿ ತಡೆಹಿಡಿಯಲಾಗಿರುವ ಸಹಕಾರಿ ಸಂಸ್ಥೆಗಳ ಅಡಿಕೆ ಸಾಗಣೆ ಲಾರಿಗಳನ್ನು ಬಿಡುಗಡೆ ಮಾಡುವಂತೆ ಒತ್ತಾಯಿಸಿ ಸಂಸದ ಬಿ.ವೈ. ರಾಘವೇಂದ್ರ ನೇತೃತ್ವದ ಅಡಿಕೆ ಸಹಕಾರಿ ನಿಯೋಗವು ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಅವರಿಗೆ ಮನವಿ ಸಲ್ಲಿಸಿದೆ. ➤ ಸುದ್ದಿಯ ಮುಂದಿನ 4 ಪ್ಯಾರಾಗಳು ಕೆಳಗಿವೆ.
ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರೊಂದಿಗೆ ನವದೆಹಲಿಯಲ್ಲಿ ಇಂದು ಮಹಾರಾಷ್ಟ್ರ ಮುಖ್ಯಮಂತ್ರಿ ಅವರನ್ನು ಭೇಟಿಯಾದ ನಿಯೋಗವು, ಮ್ಯಾಮ್ಕೋಸ್, ಕ್ಯಾಂಪ್ಕೋ, ತುಮ್ಕೋಸ್ ಮತ್ತು ರಾಜ್ಯ ಅಡಿಕೆ ಮಾರುಕಟ್ಟೆ ಸಹಕಾರ ಸಂಘಗಳ ಒಕ್ಕೂಟದ ಪರವಾಗಿ ಬೇಡಿಕೆ ಮಂಡಿಸಿತು.

ನಿಯೋಗದ ಮನವಿ ಏನು?
ಉತ್ತರ ಭಾರತದ ಮಾರುಕಟ್ಟೆಗಳಿಗೆ ತೆರಳಲು ಮಹಾರಾಷ್ಟ್ರದ ಮೂಲಕ ಹಾದುಹೋಗುತ್ತಿದ್ದ, ಜಿಎಸ್‌ಟಿ ಇನ್‌ವಾಯ್ಸ್, ಇ-ವೇ ಬಿಲ್ ಹಾಗೂ ಎಫ್‌ಎಸ್‌ಎಸ್‌ಎಐ ನೋಂದಣಿ ಸೇರಿ ಸೂಕ್ತ ದಾಖಲೆಗಳನ್ನು ಹೊಂದಿರುವ ಸುಮಾರು 50ಕ್ಕೂ ಅಧಿಕ ಅಡಿಕೆ ಟ್ರಕ್‌ಗಳನ್ನು ಮಹಾರಾಷ್ಟ್ರದ ಆಹಾರ ಮತ್ತು ಔಷಧ ಆಡಳಿತ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ. ಇದರಿಂದ ಅಡಿಕೆ ಬೆಳೆಗಾರರು ತೀವ್ರ ಆರ್ಥಿಕ ಸಂಕಷ್ಟ ಎದುರಿಸುತ್ತಿದ್ದಾರೆ ಎಂದು ನಿಯೋಗ ವಿವರಿಸಿತು.
ಸಂಸದ ರಾಘವೇಂದ್ರ ಹೇಳಿದ್ದೇನು?
ಈ ವೇಳೆ ಮಾತನಾಡಿದ ಸಂಸದ ರಾಘವೇಂದ್ರ, “ದೇಶದ ಒಟ್ಟು ಅಡಿಕೆ ಕೃಷಿಯಲ್ಲಿ ಕರ್ನಾಟಕ ಶೇ.70ಕ್ಕಿಂತ ಹೆಚ್ಚಿನ ಪಾಲು ಹೊಂದಿದೆ. ಲಕ್ಷಾಂತರ ರೈತ ಕುಟುಂಬಗಳ ಜೀವನಾಧಾರವಾಗಿರುವ ಅಡಿಕೆಯ ಸಾಗಣೆಯನ್ನು ದೀರ್ಘಕಾಲ ತಡೆಹಿಡಿಯುವುದರಿಂದ ಮಾರುಕಟ್ಟೆ ಬೆಲೆಯ ಮೇಲೆ ದುಷ್ಪರಿಣಾಮ ಬೀರುತ್ತದೆ. ಆಧುನಿಕ ಯಾಂತ್ರಿಕ ಸಿಪ್ಪೆ ತೆಗೆಯುವ ಗುರುತುಗಳನ್ನು ನೆಪವಾಗಿಸಿ ಅಡಿಕೆ ಲಾರಿಗಳನ್ನು ಮುಟ್ಟುಗೋಲು ಹಾಕಿಕೊಳ್ಳುವುದು ಸರಿಯಲ್ಲ. ಸೂಕ್ತ ದಾಖಲೆಗಳಿರುವ ವಾಹನಗಳ ಸುಗಮ ಸಂಚಾರಕ್ಕೆ ಪಾರದರ್ಶಕ ಕಾರ್ಯವಿಧಾನ ಜಾರಿಗೆ ತರಬೇಕು” ಎಂದು ಆಗ್ರಹಿಸಿದರು.
ನಿಯೋಗದಲ್ಲಿ ತೀರ್ಥಹಳ್ಳಿ ಶಾಸಕ ಹಾಗೂ ಅಡಿಕೆ ಕಾರ್ಯಪಡೆ ಅಧ್ಯಕ್ಷ ಆರಗ ಜ್ಞಾನೇಂದ್ರ, ಸಂಸದರಾದ ಕ್ಯಾಪ್ಟನ್ ಬ್ರಿಜೇಶ್ ಚೌಟಾ, ಕೋಟಾ ಶ್ರೀನಿವಾಸ ಪೂಜಾರಿ, ಮ್ಯಾಮ್ಕೋಸ್ ಉಪಾಧ್ಯಕ್ಷ ಮಹೇಶ್ ಹುಲ್ಕುಳಿ, ಕ್ಯಾಂಪ್ಕೋ ಮತ್ತು ತುಮ್ಕೋಸ್ ಸಂಸ್ಥೆಗಳ ಪದಾಧಿಕಾರಿಗಳು ಉಪಸ್ಥಿತರಿದ್ದರು.