ಇರುವಕ್ಕಿ: ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸಂಸ್ಥೆಗಳ ಒಡಂಬಡಿಕೆಯೊಂದಿಗೆ ಅತ್ಯಾಧುನಿಕ ಸಂಶೋಧನೆ ನಡೆಸಿರುವ ಶಿವಮೊಗ್ಗದ ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯವು ರೈತರ ಏಳಿಗೆಗಾಗಿ ಕಳೆದ ವರ್ಷ ವಿವಿಧ ಬೆಳೆಗಳ ನೂತನ 23 ತಳಿಗಳು, 58 ತಂತ್ರಜ್ಞಾನಗಳು ಹಾಗೂ 3 ಪೇಟೆಂಟ್‌ಗಳನ್ನು ಅಭಿವೃದ್ಧಿಪಡಿಸಿದೆ ಎಂದು ಕುಲಪತಿ ಡಾ. ಆರ್. ಸಿ. ಜಗದೀಶ ತಿಳಿಸಿದರು.
ಇರುವಕ್ಕಿಯ ವಿಶ್ವವಿದ್ಯಾಲಯದ ಆವರಣದಲ್ಲಿ ಹಮ್ಮಿಕೊಳ್ಳಲಾಗಿದ್ದ 10ನೇ ಸ್ನಾತಕೋತ್ತರ ಸಂಶೋಧನಾ ಸಮ್ಮೇಳನ ಉದ್ಘಾಟಿಸಿ ಅವರು ಮಾತನಾಡಿದರು. ನೂತನ ವಿವಿಯಾಗಿದ್ದರೂ ಸುದೀರ್ಘ ಇತಿಹಾಸವಿರುವ ಇತರೆ ಕೃಷಿ ವಿವಿಗಳ ಮಟ್ಟಕ್ಕೆ ಶೈಕ್ಷಣಿಕ ಅಭಿವೃದ್ಧಿ ಸಾಧಿಸಲಾಗಿದೆ. ವಿದ್ಯಾರ್ಥಿಗಳ ಬೇಡಿಕೆಗೆ ಅನುಗುಣವಾಗಿ ಸ್ನಾತಕೋತ್ತರ ಹಾಗೂ ಪಿಹೆಚ್‌ಡಿ ಪದವಿಗಳನ್ನು ಪ್ರಾರಂಭಿಸಲಾಗಿದೆ. ಇಲ್ಲಿನ ವಿದ್ಯಾರ್ಥಿಗಳು ವಿದೇಶಗಳಲ್ಲೂ ಅಧ್ಯಯನ ಕೈಗೊಳ್ಳುತ್ತಿದ್ದಾರೆ ಎಂದರು.

ಮುಖ್ಯ ಅತಿಥಿಯಾಗಿದ್ದ ಶಿಕ್ಷಣ ನಿರ್ದೇಶಕ ಡಾ. ಬಿ.ಹೇಮ್ಲಾ ನಾಯ್ಕ ಮಾತನಾಡಿ, ಕೃಷಿ ಸಂಶೋಧನೆ ನಿರಂತರ ಪ್ರಕ್ರಿಯೆ. ರೈತರ ಸಂಕಷ್ಟಗಳಿಗೆ ತಂತ್ರಜ್ಞಾನಗಳ ಮೂಲಕ ಸೂಕ್ತ ಸಮಯಕ್ಕೆ ಪರಿಹಾರ ನೀಡುವಲ್ಲಿ ಯುವ ವಿಜ್ಞಾನಿಗಳ ಪಾತ್ರ ದೊಡ್ಡದಾಗಿದೆ ಎಂದರು.
ಸಮ್ಮೇಳನದಲ್ಲಿ 104 ಸ್ನಾತಕೋತ್ತರ ವಿದ್ಯಾರ್ಥಿಗಳು ಪೋಸ್ಟರ್ ಪ್ರಸ್ತುತಿ ಹಾಗೂ 11 ಪಿಎಚ್.ಡಿ ವಿದ್ಯಾರ್ಥಿಗಳು ಮೌಖಿಕ ಪ್ರಸ್ತುತಿ ಮೂಲಕ ಸಂಶೋಧನಾ ಫಲಿತಾಂಶ ಮಂಡಿಸಲಿದ್ದಾರೆ.
– ಡಾ. ಟಿ. ಕೆ. ನಾಗರತ್ನ, ಸ್ನಾತಕೋತ್ತರ ಡೀನ್
ಕಾರ್ಯಕ್ರಮದಲ್ಲಿ ಸಂಶೋಧನಾ ನಿರ್ದೇಶಕ ಡಾ. ಎಸ್. ಶ್ರೀಧರ, ವಿಸ್ತರಣಾ ನಿರ್ದೇಶಕ ಡಾ. ರಾಘವೇಂದ್ರ ಮೇಸ್ತ, ವಿದ್ಯಾರ್ಥಿ ಕಲ್ಯಾಣ ಡೀನ್ ಡಾ. ನಾರಾಯಣ ಮಾವರಕರ ಉಪಸ್ಥಿತರಿದ್ದರು. ಕೃಷಿ ಮಹಾವಿದ್ಯಾಲಯದ ಡೀನ್ ಡಾ. ಹೆಚ್.ಕೆ. ವೀರಣ್ಣ ವಂದಿಸಿದರು.