ಶಿವಮೊಗ್ಗ: ಆರೋಗ್ಯ ಸಚಿವ ಯು.ಟಿ.ಖಾದರ್ ಅವರು ಶಿವಮೊಗ್ಗ ಪ್ರವಾಸ ಕೈಗೊಂಡಿದ್ದು, ನಗರದ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಆರೋಗ್ಯ ಇಲಾಖೆಯ ವೈದ್ಯಾಧಿಕಾರಿಗಳು ಹಾಗೂ ತಂತ್ರಜ್ಞರೊಂದಿಗೆ ಪ್ರಗತಿ ಪರಿಶೀಲನಾ ಸಭೆ ನಡೆಸಿದರು. ಸಭೆಯ ಬಳಿಕ ಅವರು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದರು.
ಏನೆಲ್ಲ ಚರ್ಚೆಯಾಯ್ತು? ಮಿನಿಸ್ಟರ್ ಏನಂದ್ರು?
ಜಿಲ್ಲೆಯ ಮೆಗ್ಗಾನ್ ಆಸ್ಪತ್ರೆಯಲ್ಲಿ ತಜ್ಞ ವೈದ್ಯರ ಹೈ ರಿಸ್ಕ್ ಟೀಮ್ ಇದ್ದಾಗ್ಯೂ ಚಿಕಿತ್ಸೆಗೆ ಬರುವ ರೋಗಿಗಳಿಗೆ ಸಕಾಲದಲ್ಲಿ ಸೂಕ್ತ ಚಿಕಿತ್ಸೆ ನೀಡದೆ ಬೇರೆಡೆಗೆ ಶಿಫಾರಸ್ಸು ಮಾಡುವ ಕ್ರಮ ಸರಿಯಲ್ಲ ಎಂದು ಸಚಿವರು ಅಸಮಾಧಾನ ವ್ಯಕ್ತಪಡಿಸಿದರು. ಜಿಲ್ಲೆಯ ವೈದ್ಯಕೀಯ ಕ್ಷೇತ್ರದಲ್ಲಿ ಸೌಲಭ್ಯ ಲಭ್ಯವಿದ್ದಾಗಲೂ ಬಾಣಂತಿ ಅಥವಾ ಮಗುವಿನ ಸಾವು ಸಂಭವಿಸುವುದು ಸರ್ಕಾರಕ್ಕೆ ಸಮಾಧಾನದ ಸಂಗತಿಯಲ್ಲ. ಬಾಣಂತಿ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಜಿಲ್ಲಾಧಿಕಾರಿಗಳ ಮಟ್ಟದ ತನಿಖೆ ಹಾಗೂ ರಾಜ್ಯಮಟ್ಟದ ಅಧಿಕಾರಿಗಳು ಮತ್ತು ತಜ್ಞರಿಂದಲೂ ತನಿಖೆ ನಡೆಸಿ ವರದಿ ನೀಡುವಂತೆ ಸೂಚಿಸಲಾಗಿದೆ.

ಜಿಲ್ಲೆಯ 19 ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಖಾಲಿ ಇರುವ ವೈದ್ಯಾಧಿಕಾರಿಗಳ ಸ್ಥಾನಗಳಿಗೆ ಶೀಘ್ರದಲ್ಲಿ ಎಂಬಿಬಿಎಸ್ ವೈದ್ಯರನ್ನು ಗುತ್ತಿಗೆ ಆಧಾರದಲ್ಲಿ ನೇಮಕ ಮಾಡಲಾಗುವುದು. ಗುತ್ತಿಗೆ ಸೇವೆಗೆ ಮುಂದಾಗಿ ಅರ್ಜಿ ಸಲ್ಲಿಸುವ ಅರ್ಹ ವೈದ್ಯರ ಅರ್ಜಿಗಳನ್ನು ಪರಿಶೀಲಿಸಿ, ಸಂದರ್ಶನ ಪೂರ್ಣಗೊಂಡ ಮೂರು ದಿನಗಳಲ್ಲಿ ನೇಮಕಾತಿ ಆದೇಶ ಪತ್ರ ನೀಡಲಾಗುವುದು. ಆರೋಗ್ಯ ಇಲಾಖೆಯಲ್ಲಿ ಖಾಲಿ ಇರುವ ಡಾಕ್ಟರ್, ಎಎನ್‌ಎಂ, ಫಾರ್ಮಸಿಸ್ಟ್, ನರ್ಸ್, ಲ್ಯಾಬ್ ಟೆಕ್ನೀಷಿಯನ್ಸ್ ಹಾಗೂ ಡಿ-ಗ್ರೂಪ್ ನೌಕರರ ಭರ್ತಿಗೆ ಮೊದಲ ಆದ್ಯತೆ ನೀಡಲಾಗಿದೆ. ಮುಖ್ಯಮಂತ್ರಿ ಜೊತೆಗೆ ಸಮಾಲೋಚನೆ ನಡೆಸಿ ಶೀಘ್ರ ನೇಮಕಾತಿ ಪ್ರಕ್ರಿಯೆಗೆ ಚಾಲನೆ ನೀಡಲಾಗುವುದು. ನಗರದಿಂದ ದೂರದ ಮಲೆನಾಡು, ಗುಡ್ಡಗಾಡು, ಗಡಿ ಹಾಗೂ ಕಾಡಿನ ಮಧ್ಯದ ಪ್ರದೇಶಗಳಲ್ಲಿ ಸೇವೆ ಸಲ್ಲಿಸುತ್ತಿರುವ ಸಿಬ್ಬಂದಿಗೆ ವಿಶೇಷ ವೇತನ ಭತ್ಯೆ ನೀಡಲು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ.
ಮಂಗನಕಾಯಿಲೆ (KFD) ನಿಯಂತ್ರಣ ಕುರಿತು ಶೀಘ್ರದಲ್ಲಿ ಬೆಂಗಳೂರಿನಲ್ಲಿ ತಜ್ಞರು ಹಾಗೂ ಉನ್ನತ ಮಟ್ಟದ ಅಧಿಕಾರಿಗಳ ಸಭೆ ಕರೆಯಲಾಗುವುದು. ಪ್ರಸಕ್ತ ಸಾಲಿನಲ್ಲಿ ಈವರೆಗೆ ಗುರುತಿಸಲಾಗಿರುವ 130 ಪ್ರಕರಣಗಳಲ್ಲಿ ಐದು ಜನರು ಮೃತರಾಗಿದ್ದಾರೆ. ಮಂಗನ ಕಾಯಿಲೆ ನಿಯಂತ್ರಣಕ್ಕೆ ಈ ಹಿಂದೆ ಬಳಸುತ್ತಿದ್ದ ತೈಲವನ್ನು ಹಲವು ಕಾರಣಗಳಿಂದಾಗಿ ಹಿಂಪಡೆಯಲಾಗಿದೆ. ಹೊಸ ಔಷಧ ಸಂಶೋಧಿಸಲು ಇತ್ತೀಚೆಗೆ ಕೇಂದ್ರ ವೈದ್ಯಕೀಯ ಸಚಿವರೊಂದಿಗೂ ಚರ್ಚೆ ನಡೆಸಲಾಗಿದೆ. ಇದೇ ವೇಳೆ ಶಿವಮೊಗ್ಗದಲ್ಲಿ ಪ್ರತ್ಯೇಕ ಜಿಲ್ಲಾ ಆಸ್ಪತ್ರೆ ನಿರ್ಮಾಣಕ್ಕೆ ಜಾಗ ಪರಿಶೀಲಿಸಿ ಕ್ರಮ ವಹಿಸಲಾಗುವುದು ಎಂದು ಸಚಿವ ಯು.ಟಿ.ಖಾದರ್ ಸ್ಪಷ್ಟಪಡಿಸಿದರು.
ಜಿಲ್ಲೆಯಲ್ಲಿ ಡೆಂಗಿ, ಚಿಕೂನ್‌ಗುನ್ಯಾ, ಮಲೇರಿಯಾ ಮುಂತಾದ ಸಾಂಕ್ರಾಮಿಕ ರೋಗಗಳ ನಿಯಂತ್ರಣಕ್ಕೆ ಅಗತ್ಯವಿರುವ ಔಷಧಗಳ ದಾಸ್ತಾನು ಇದೆ. ಸೊಳ್ಳೆಗಳ ನಿಯಂತ್ರಣ ಕ್ರಮ ಮೊದಲ ಹೆಜ್ಜೆಯಾಗಿದೆ. ವೈದ್ಯಕೀಯ ಸಿಬ್ಬಂದಿ ಜನರಲ್ಲಿ ಸ್ವಚ್ಛತೆಯ ಕುರಿತು ಅರಿವು ಮೂಡಿಸಬೇಕು ಹಾಗೂ ಅಗತ್ಯವಿರುವೆಡೆ ಫಾಗಿಂಗ್ ಯಂತ್ರಗಳನ್ನು ಬಳಸಬೇಕು. ಸ್ಥಳೀಯ ಸಂಸ್ಥೆಗಳು ಅಂಗಡಿ ಮುಂಗಟ್ಟುಗಳ ಪರವಾನಗಿ ನೀಡುವ ಸಂದರ್ಭ ಸ್ವಚ್ಛತೆಯ ಕುರಿತು ನಿಬಂಧನೆ ವಿಧಿಸಬೇಕು, ತಪ್ಪಿದಲ್ಲಿ ನಿರ್ದಾಕ್ಷಿಣ್ಯವಾಗಿ ಪರವಾನಗಿ ರದ್ದುಗೊಳಿಸಬೇಕು ಎಂದು ಸೂಚಿಸಿದರು.
ಆಯುಷ್ಮಾನ್ ಭಾರತ್ ಯೋಜನೆಯಡಿ ಬಿಪಿಎಲ್ ಕುಟುಂಬದವರಿಗೆ ಉಚಿತ ಆರೋಗ್ಯ ತಪಾಸಣೆ ಹಾಗೂ ಚಿಕಿತ್ಸೆ ನೀಡಲಾಗುತ್ತಿದೆ. ಕೆಲವು ಕಡೆಗಳಲ್ಲಿ ಚಿಕಿತ್ಸೆಗೆ ದಾಖಲಾದ ವ್ಯಕ್ತಿಯಿಂದ ಹಣ ವಸೂಲಿ ಮಾಡುತ್ತಿರುವ ಬಗ್ಗೆ ಆರೋಪ ಕೇಳಿ ಬಂದಿದೆ. ಇಂತಹ ಘಟನೆಗಳು ಮರುಕಳಿಸಿ ದೂರುಗಳು ದಾಖಲಾದಲ್ಲಿ ಸಂಬಂಧಪಟ್ಟ ಅಧಿಕಾರಿ ಮತ್ತು ಸಿಬ್ಬಂದಿ ವಿರುದ್ಧ ಕಟ್ಟುನಿಟ್ಟು ಕ್ರಮ ಕೈಗೊಳ್ಳಲಾಗುವುದು. ಆಯುಷ್ಮಾನ್ ಯೋಜನೆಯ ನೋಂದಣಿ ಸಂದರ್ಭ ತಾಂತ್ರಿಕ ಸಮಸ್ಯೆಗಳ ನೆಪವೊಡ್ಡಿ ಸಾರ್ವಜನಿಕರಿಗೆ ಅನಗತ್ಯ ಕಿರಿಕಿರಿ ಉಂಟು ಮಾಡಿದರೆ ಆರೋಗ್ಯಮಿತ್ರ ಸಿಬ್ಬಂದಿ ಮತ್ತು ಕಾರ್ಯಕ್ರಮ ಸಂಯೋಜಕರ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಯು.ಟಿ.ಖಾದರ್ ಎಚ್ಚರಿಸಿದರು.
ಸಭೆಯಲ್ಲಿ ಶಾಸಕರಾದ ಆರಗ ಜ್ಞಾನೇಂದ್ರ, ಎಸ್.ಎನ್.ಚನ್ನಬಸಪ್ಪ, ವಿಧಾನ ಪರಿಷತ್ ಸದಸ್ಯ ಡಿ.ಎಸ್.ಅರುಣ್, ಅಲೆಮಾರಿ ಅಭಿವೃದ್ಧಿ ನಿಗಮದ ಅಧ್ಯಕ್ಷೆ ಜಿ.ಪಲ್ಲವಿ, ಜಿಲ್ಲಾಧಿಕಾರಿ ಪ್ರಭುಲಿಂಗ ಕವಳಿಕಟ್ಟಿ ಸೇರಿ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.