ಶಿವಮೊಗ್ಗ: ನಗರದ ವಿವಿಧ ಬ್ಯಾಂಕುಗಳು ಹಾಗೂ ಜ್ಯುವೆಲರಿ ಶಾಪ್ನಲ್ಲಿ ಬಂಗಾರ ಲೇಪಿತ ನಕಲಿ ಆಭರಣಗಳನ್ನು ಗಿರವಿ ಇಟ್ಟು ₹28.87 ಲಕ್ಷ ಗೋಲ್ಡ್ ಲೋನ್ ಪಡೆದು ವಂಚಿಸಿರುವ ಜಾಲವನ್ನು ದೊಡ್ಡಪೇಟೆ ಠಾಣೆ ಪೊಲೀಸರು ಭೇದಿಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ತೀರ್ಥಹಳ್ಳಿ ತಾಲ್ಲೂಕಿನ ಬಿಳ್ಮನೆ ಅರೆಕಲ್ಲು ಗ್ರಾಮದ ಲೋಕೇಶ್ ಬಿ.ಜೆ (39) ಎಂಬುವವರನ್ನು ಬಂಧಿಸಲಾಗಿದೆ.
ಶಿವಮೊಗ್ಗದ ಸವಾರ್ ಲೈನ್ ರಸ್ತೆಯಲ್ಲಿರುವ ಪಂಜಾಬ್ ನ್ಯಾಷನಲ್ ಬ್ಯಾಂಕ್ನ ಶಾಖಾ ವ್ಯವಸ್ಥಾಪಕ ದಾರವತೋ ಕ್ರಾಂತಿಕುಮಾರ್ ಅವರು ನೀಡಿದ ದೂರಿನ ಮೇರೆಗೆ ದೊಡ್ಡಪೇಟೆ ಪೊಲೀಸರು ಪ್ರಕರಣ ದಾಖಲಿಸಿದ್ದರು. ತನಿಖೆ ಕೈಗೊಂಡ ಪೊಲೀಸರು ಪ್ರಮುಖ ಆರೋಪಿ ಲೋಕೇಶ್ನನ್ನು ಬಂಧಿಸಿ, ಆತನ ಸ್ವಇಚ್ಛಾ ಹೇಳಿಕೆ ಆಧಾರದ ಮೇಲೆ ವಿವಿಧ ಬ್ಯಾಂಕ್ ಹಾಗೂ ಜ್ಯುವೆಲರಿ ಶಾಪ್ಗಳಲ್ಲಿ ಅಡವಿಟ್ಟಿದ್ದ ಒಟ್ಟು 419.824 ಗ್ರಾಂ ತೂಕದ ನಕಲಿ ಬಂಗಾರದ ಆಭರಣಗಳನ್ನು ವಶಪಡಿಸಿಕೊಂಡಿದ್ದಾರೆ ಎಂದು ಪೊಲೀಸ್ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಎಲ್ಲೆಲ್ಲಿ ನಕಲಿ ಚಿನ್ನ ಅಡವಿಟ್ಟಿದ್ದ?
ಪಂಜಾಬ್ ನ್ಯಾಷನಲ್ ಬ್ಯಾಂಕ್ನಲ್ಲಿ 163.300 ಗ್ರಾಂ ಅಡ ಇಟ್ಟು ₹7,62,557 ಸಾಲ, ತೀರ್ಥಹಳ್ಳಿ ವರ್ತಕರ ಸೌಹಾರ್ಧ ಸಂಘ ನಿಯಮಿತದಲ್ಲಿ 75.844 ಗ್ರಾಂ ಅಡ ಇಟ್ಟು ₹9,33,000 ಸಾಲ, ಸಿರಿ ಸೌಹಾರ್ಧ ಕ್ರೆಡಿಟ್ ಕೋ-ಆಪರೇಟಿವ್ ಸಂಘ 75.01 ಗ್ರಾಂ ಅಡ ಇಟ್ಟು ₹7,43,000 ಸಾಲ, ಡಿ.ಸಿ.ಸಿ ಬ್ಯಾಂಕ್ – 48.28 ಗ್ರಾಂ ಅಡ ಇಟ್ಟು ₹1,79,000 ಸಾಲ, ಗುಲಾಬಿ ಜ್ಯೂವೆಲರಿ ವರ್ಕ್ಸ್ 30.90 ಗ್ರಾಂ ಅಡ ಇಟ್ಟು ₹1,90,000 ಸಾಲ, ಇಂಡಿಯನ್ ಓವರ್ಸೀಸ್ ಬ್ಯಾಂಕ್ನಲ್ಲಿ 26.490 ಗ್ರಾಂ ಅಡ ಇಟ್ಟು ₹1,10,000 ಸಾಲ ಪಡೆದಿದ್ದ ಎಂದು ಪೊಲೀಸ್ ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಇನ್ನೂ ನಾಲ್ವರ ಬೆನ್ನು ಬಿದ್ದ ಪೊಲೀಸರು
ಪ್ರಕರಣದಲ್ಲಿ ಲೋಕೇಶ್ ಜೊತೆಗೆ ಸುಧಾ, ರವಿಶಂಕರ್, ರಾಹುಲ್ ಹಾಗೂ ಶರತ್ ಅವರನ್ನು ಆರೋಪಿಗಳನ್ನಾಗಿ ಮಾಡಲಾಗಿದೆ. ಈ ನಾಲ್ವರು ಕೂಡ ತಿ ನಕಲಿ ಬಂಗಾರವನ್ನು ಬ್ಯಾಂಕುಗಳಲ್ಲಿ ಗಿರವಿ ಇಟ್ಟು ಸಾಲ ಪಡೆದಿರುವ ಶಂಕೆ ಇದೆ. ಈ ನಾಲ್ವರಿಗಾಗಿ ಶೋಧ ಕಾರ್ಯ ನಡೆಯುತ್ತಿದೆ. ದೊಡ್ಡಪೇಟೆ ಪೊಲೀಸ್ ಇನ್ಸ್ಪೆಕ್ಟರ್ ಸತ್ಯನಾರಾಯಣ, ಪಿಎಸ್ಐ ನಾರಾಯಣ ಮಧುಗಿರಿ, ಎಎಸ್ಐ ಚೂಡಾಮಣಿ, ಸಿಬ್ಬಂದಿ ಪುನೀತ್, ಸಂದೀಪ್, ಗುರುನಾಯ್ಕ, ರಾಜೇಶ್ ಗೌಡ ಪಾಟೀಲ್ ಹಾಗೂ ಪುಟ್ಟಮ್ಮ ಅವರು ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.