ಶಿವಮೊಗ್ಗ: ಗೃಹಲಕ್ಷ್ಮಿ ಯೋಜನೆಯ 31ನೇ ಕಂತಿನ ಹಣ ಬಿಡುಗಡೆಯಾಗಿದೆ. ಇನ್ನೊಂದೆರಡು ದಿನಗಳಲ್ಲಿ ಫಲಾನುಭವಿಗಳ ಬ್ಯಾಂಕ್ ಖಾತೆಗೆ ಜಮೆಯಾಗಲಿದೆ ಎಂದು ಜಿಲ್ಲಾ ಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಸಿ.ಎಸ್. ಚಂದ್ರಭೂಪಾಲ್ ತಿಳಿಸಿದರು.
ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ನಡೆದ ರಾಜ್ಯ ಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ರಾಜ್ಯಾಧ್ಯಕ್ಷರ ವಿಡಿಯೋ ಸಂವಾದದ ನಂತರ ನಡೆದ ಸಭೆಯಲ್ಲಿ ಅವರು ಮಾತನಾಡಿದರು.

ಜಿಲ್ಲೆಯ ಒಟ್ಟು 3,79,858 ಅರ್ಹ ಮಹಿಳಾ ಫಲಾನುಭವಿಗಳಿಗೆ 31ನೇ ಕಂತಿನ ಲಾಭ ಸಿಗಲಿದೆ. ಒಟ್ಟು ₹75.97 ಕೋಟಿ ಹಣ ಬಿಡುಗಡೆಯಾಗಿದೆ. ಪ್ರತಿ ಫಲಾನುಭವಿಯ ಖಾತೆಗೆ ತಲಾ ₹2,000 ನೇರವಾಗಿ ಜಮೆಯಾಗಲಿದೆ. ಜಿಲ್ಲೆಯಲ್ಲಿ ಈವರೆಗೆ 30 ಕಂತುಗಳಲ್ಲಿ ಡಿಬಿಟಿ ಮೂಲಕ ₹3,110.48 ಕೋಟಿಗೂ ಅಧಿಕ ಹಣ ಜಮೆಯಾಗಿದೆ ಎಂದು ಚಂದ್ರಭೂಪಾಲ್ ತಿಳಿಸಿದರು.
ಮೃತರ ಖಾತೆಯಿಂದ ಹಣ ವಾಪಸ್
ಜಿಲ್ಲೆಯಲ್ಲಿ ಮರಣ ಹೊಂದಿದ 9,247 ಫಲಾನುಭವಿಗಳನ್ನು ಗುರುತಿಸಲಾಗಿದೆ. ಅವರ ಖಾತೆಗೆ ಜಮೆಯಾಗಿದ್ದ ಹಣವನ್ನು ಹಿಂಪಡೆಯುವ ಪ್ರಕ್ರಿಯೆ ನಡೆಯುತ್ತಿದೆ. ಈ ಪೈಕಿ ಈಗಾಗಲೇ 3,600 ಫಲಾನುಭವಿಗಳಿಂದ ₹3,79,82,000 ಹಣವನ್ನು ವಾಪಸ್ ಪಡೆಯಲಾಗಿದೆ ಎಂದು ವಿವರಿಸಿದರು.
ಉಚಿತ ವಿದ್ಯುತ್ ಸ್ಥಗಿತಗೊಳಿಸುವುದಿಲ್ಲ
ಗೃಹಜ್ಯೋತಿ ಯೋಜನೆಯಡಿ 200 ಯೂನಿಟ್‌ವರೆಗೆ ಉಚಿತ ವಿದ್ಯುತ್ ಪಡೆಯುತ್ತಿರುವ ಗ್ರಾಹಕರ ಮಾಹಿತಿ ಪರಿಶೀಲನಾ ಕಾರ್ಯ ಜುಲೈ 1 ರಿಂದ ಆರಂಭವಾಗಿದ್ದು, ಸಾರ್ವಜನಿಕರು ಆತಂಕ ಪಡುವ ಅಗತ್ಯವಿಲ್ಲ. ಮೆಸ್ಕಾಂ ಮೀಟರ್ ರೀಡರ್‌ಗಳು ಮನೆ ಮನೆಗೆ ಭೇಟಿ ನೀಡಿ ದಾಖಲೆ ಪರಿಶೀಲಿಸುತ್ತಿದ್ದು, ಗ್ರಾಹಕರು ಕಚೇರಿಗೆ ಅಲೆಯುವ ಅಗತ್ಯವಿಲ್ಲ. ಇದು ಕೇವಲ ವಿವರಗಳನ್ನು ಅಪ್‌ಡೇಟ್ ಮಾಡಿಕೊಳ್ಳುವ ಸಾಮಾನ್ಯ ಪ್ರಕ್ರಿಯೆ. ಉಚಿತ ವಿದ್ಯುತ್ ಸ್ಥಗಿತಗೊಳಿಸುವುದಿಲ್ಲ. ಜಿಲ್ಲೆಯಲ್ಲಿ ನೋಂದಣಿಯಾಗಿರುವ 5,09,133 ಮನೆಗಳ ಪೈಕಿ ಈಗಾಗಲೇ 1,38,566 ಮನೆಗಳ ಸಮೀಕ್ಷೆ ಪೂರ್ಣಗೊಂಡಿದೆ ಎಂದು ಚಂದ್ರಭೂಪಾಲ್ ತಿಳಿಸಿದರು.
ಸಭೆಯಲ್ಲಿ ಜಿಲ್ಲಾ ಪ್ರಾಧಿಕಾರದ ಉಪಾಧ್ಯಕ್ಷ ಎಂ.ಎಸ್. ಬಸವರಾಜಪ್ಪ, ಆರ್. ಶಿವಣ್ಣ, ಇಕ್ಕೇರಿ ರಮೇಶ್, ತಾಲ್ಲೂಕು ಪ್ರಾಧಿಕಾರದ ಅಧ್ಯಕ್ಷ ಹೆಚ್.ಎಂ. ಮಧು, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕಿ ಭಾರತಿ ಬಣಕಾರ್, ಮೆಸ್ಕಾಂ ನಿಯಂತ್ರಣಾಧಿಕಾರಿ ಚಂದ್ರಕಲಾ ಸೇರಿದಂತೆ ವಿವಿಧ ಅಧಿಕಾರಿಗಳು ಉಪಸ್ಥಿತರಿದ್ದರು.