ಆರ್ಡರ್‌ ಮಾಡಿದ್ದು ಸಸ್ಯಾಹಾರಿ ಬರ್ಗರ್‌, ಬಂದಿದ್ದು ಮಾಂಸಾಹಾರಿ, ಕೋರ್ಟ್‌ ಮೆಟ್ಟಿಲೇರಿದ ಕೇಸ್‌

ನಿಮ್ಮೂರ ಸುದ್ದಿ ಕೆಲವೇ ನಿಮಿಷದಲ್ಲಿ ಸಾವಿರ ಸಾವಿರ ಜನರನ್ನು ತಲುಪುತ್ತೆ!

ಶಿವಮೊಗ್ಗ ಜಿಲ್ಲೆಯ ಯಾವುದೇ ಊರಿನ ಸುದ್ದಿಯನ್ನು ನಮಗೆ ಕಳುಹಿಸಬಹುದು. ನಮ್ಮ ವಾಟ್ಸಪ್‌ ನಂಬರ್ 7411700200.

NEWS HIGHLIGHTS

ಶಿವಮೊಗ್ಗ: ಸಸ್ಯಾಹಾರಿ ಬರ್ಗರ್ ಬದಲಿಗೆ ಮಾಂಸಾಹಾರಿ ಬರ್ಗರ್ ತಲುಪಿಸಿ ಸೇವಾ ನ್ಯೂನತೆ ಎಸಗಿದ ಆನ್‌ಲೈನ್ ಆಹಾರ ವಿತರಣಾ ಸಂಸ್ಥೆ ಮತ್ತು ಹೋಟೆಲ್ ಮಾಲೀಕರಿಗೆ ಶಿವಮೊಗ್ಗ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗವು ದಂಡ ವಿಧಿಸಿದೆ.

➤ ಸುದ್ದಿಯ ಮುಂದಿನ 4 ಪ್ಯಾರಾಗಳು ಕೆಳಗಿವೆ.

ನಗರದ ಜೆ.ಪಿ.ಎನ್. ರಸ್ತೆ ನಿವಾಸಿ ನಂದೀಶ್ ಎಂಬುವವರು 2025ರ ಆಗಸ್ಟ್ 27ರಂದು ಗಣೇಶ ಚತುರ್ಥಿ ಹಬ್ಬದಂದು ಫುಡ್‌ ಡಿಲೆವರಿ ಆ್ಯಪ್ ಮೂಲಕ ₹313.15 ಪಾವತಿಸಿ ಸಸ್ಯಾಹಾರಿ ಬರ್ಗರ್ ಆರ್ಡರ್ ಮಾಡಿದ್ದರು. ಆದರೆ ಅವರಿಗೆ ಸಸ್ಯಾಹಾರದ ಬದಲಾಗಿ ಮಾಂಸಾಹಾರಿ ಬರ್ಗರ್ ವಿತರಿಸಲಾಗಿತ್ತು. ಈ ಬಗ್ಗೆ ಸಂಸ್ಥೆಗೆ ದೂರು ನೀಡಿದಾಗ, ಫುಡ್‌ ಡಿಲೆವರಿ ಸಂಸ್ಥೆ ಕೇವಲ ಬರ್ಗರ್‌ ಹಣವನ್ನು ಮರುಪಾವತಿಸಿ ಜವಾಬ್ದಾರಿಯಿಂದ ನುಣುಚಿಕೊಳ್ಳಲು ಯತ್ನಿಸಿತ್ತು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.  

Shimoga-Consumer-Court.

ಹಬ್ಬದ ದಿನ ಮಾಂಸಾಹಾರಿ ಬರ್ಗರ್‌ ತಲುಪಿಸಿ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರಲಾಗಿದೆ ಎಂದು ನಂದೀಶ್ ಅವರು ವಕೀಲರಾದ ಚಾಂದ್ ಎಸ್. ಅವರ ಮೂಲಕ ಜಿಲ್ಲಾ ಗ್ರಾಹಕ ಆಯೋಗಕ್ಕೆ ದೂರು ಸಲ್ಲಿಸಿದ್ದರು.

ಫುಡ್‌ ಡಿಲೆವರಿ ಕಂಪನಿಯ ವಾದವೇನು?

ವಿಚಾರಣೆ ವೇಳೆ ಫುಡ್‌ ಡಿಲೆವರಿ ಸಂಸ್ಥೆಯು, ತಮ್ಮದು ಕೇವಲ ಆರ್ಡರ್ ತೆಗೆದುಕೊಳ್ಳುವ ಆನ್‌ಲೈನ್ ವೇದಿಕೆಯಾಗಿದ್ದು, ಗ್ರಾಹಕರು ನೇರವಾಗಿ ಹೋಟೆಲ್‌ಗೆ ಆರ್ಡರ್ ಮಾಡಿರುತ್ತಾರೆ. ಇದರಲ್ಲಿ ನಮ್ಮ ಯಾವುದೇ ಲೋಪ ಅಥವಾ ಸೇವಾನ್ಯೂನತೆ ಇಲ್ಲ ಎಂದು ವಾದಿಸಿತ್ತು.

ಆಯೋಗದ ಆದೇಶ

ಕೂಲಂಕಷವಾಗಿ ಪರಿಶೀಲಿಸಿದ ಜಿಲ್ಲಾ ಗ್ರಾಹಕ ಆಯೋಗದ ಅಧ್ಯಕ್ಷರಾದ ಟಿ. ಶಿವಣ್ಣ ಮತ್ತು ಸದಸ್ಯರಾದ ಬಿ.ಡಿ.ಯೋಗಾನಂದ ಭಾಂಡ್ಯ ಅವರನ್ನು ಪೀಠವು ಸೇವಾನ್ಯೂನತೆಯನ್ನು ಎತ್ತಿಹಿಡಿದಿದೆ. ಫುಡ್‌ ಡಿಲೆವರಿ ಮತ್ತು ಶಿವಮೊಗ್ಗದ ಹೋಟೆಲ್ ಮಾಲೀಕರು ತೊಂದರೆಗಾಗಿ ₹10,000 ಪರಿಹಾರ ನೀಡಬೇಕು. ಕಾನೂನು ಹೋರಾಟದ ವೆಚ್ಚವಾಗಿ ಹೆಚ್ಚುವರಿಯಾಗಿ ₹10,000 ಪಾವತಿಸಬೇಕು. ಈ ಒಟ್ಟು ಮೊತ್ತವನ್ನು ಆದೇಶ ಹೊರಬಿದ್ದ 45 ದಿನಗಳ ಒಳಗಾಗಿ ಪಾವತಿಸಬೇಕು. ತಪ್ಪಿದಲ್ಲಿ, ಈ ಮೊತ್ತಕ್ಕೆ ವಾರ್ಷಿಕ ಶೇ.12ರಷ್ಟು ಬಡ್ಡಿ ಸೇರಿಸಿ ಪಾವತಿಸಬೇಕಾಗುತ್ತದೆ ಎಂದು ಆಯೋಗವು ಆದೇಶಿಸಿದೆ.

ಶಿವಮೊಗ್ಗ ಲೈವ್ ಅಪ್ಡೇಟ್ಸ್

ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮ ವಾಟ್ಸಪ್ ಗ್ರೂಪ್ ಸೇರಿರಿ!