ಶಿವಮೊಗ್ಗ: ಇಂಟರ್ನೆಟ್ ಸಂಪರ್ಕ ಶ್ರೀಮಂತರ ಐಷಾರಾಮಿ ಸೌಲಭ್ಯವಲ್ಲ. ಅದು ನೀರು, ರಸ್ತೆ ಹಾಗೂ ವಿದ್ಯುತ್‌ನಷ್ಟೇ ಅತ್ಯಾವಶ್ಯಕ ಹಕ್ಕು. ಮಲೆನಾಡಿನ ಕಟ್ಟಕಡೆಯ ಹಳ್ಳಿಗೂ ಅಂತರ್ಜಾಲ ತಲುಪಿಸಿ, ಶಿವಮೊಗ್ಗವನ್ನು ದೇಶದಲ್ಲೇ ಮಾದರಿ ಡಿಜಿಟಲ್ ಸಂಪರ್ಕ ಹೊಂದಿರುವ ಜಿಲ್ಲೆಯನ್ನಾಗಿ ರೂಪಿಸುವುದು ನಮ್ಮ ಸಂಕಲ್ಪ ಎಂದು ಸಂಸದ ಬಿ.ವೈ. ರಾಘವೇಂದ್ರ ಹೇಳಿದರು.
ನಗರದ ಪಿಇಎಸ್ ತಾಂತ್ರಿಕ ಹಾಗೂ ಮ್ಯಾನೇಜ್‌ಮೆಂಟ್ ಕಾಲೇಜು ಮತ್ತು ಜಾಗತಿಕ ಸಂಸ್ಥೆಯಾದ ಇಂಟರ್ನೆಟ್ ಸೊಸೈಟಿ ಜಂಟಿಯಾಗಿ ಹಮ್ಮಿಕೊಂಡಿದ್ದ 5 ದಿನಗಳ ರಾಷ್ಟ್ರೀಯ ಮಟ್ಟದ ಬೂಟ್‌ಕ್ಯಾಂಪ್‌ನ ಸಮಾರೋಪ ಹಾಗೂ ಘಟಿಕೋತ್ಸವ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಅವರು ಮಾತನಾಡಿದರು.

ಮಲೆನಾಡ ನೆಟ್‌ವರ್ಕ್ ಸಮಸ್ಯೆಗೆ ಶಾಶ್ವತ ಮುಕ್ತಿ
ಇಂಟರ್ನೆಟ್ ಸಂಪರ್ಕವಿಲ್ಲದ ಜಿಲ್ಲೆಯ ಅತಿ ದುರ್ಗಮ ಹಾಗೂ ಕಾಡಂಚಿನ 6 ಆಯ್ದ ಗ್ರಾಮಗಳಲ್ಲಿ ಪ್ರಾಯೋಗಿಕವಾಗಿ ಕಮ್ಯುನಿಟಿ ವೈರ್ಲೆಸ್ ನೆಟ್‌ವರ್ಕ್ ಸ್ಥಾಪಿಸಲು ಬಿಎಸ್‌ಎನ್‌ಎಲ್ ಹಾಗೂ ಜಿಲ್ಲಾಡಳಿತದೊಂದಿಗೆ ಸಭೆ ನಡೆಸಿ ತೀರ್ಮಾನಿಸಲಾಗಿದೆ. ಈ ಯೋಜನೆಗೆ ಪಿಇಎಸ್ ಸಂಸ್ಥೆ ಹಾಗೂ ಇಂಟರ್ನೆಟ್ ಸೊಸೈಟಿ ತಾಂತ್ರಿಕ ಬೆಂಬಲ ನೀಡಲಿವೆ. ಇದು ಯಶಸ್ವಿಯಾದ ನಂತರ ಜಿಲ್ಲೆಯಾದ್ಯಂತ ವಿಸ್ತರಿಸಿ, ಮಲೆನಾಡಿನ ನೆಟ್‌ವರ್ಕ್ ಸಮಸ್ಯೆಗೆ ಶಾಶ್ವತ ಮುಕ್ತಿ ನೀಡಲಾಗುವುದು ಎಂದು ಸಂಸದ ಬಿ.ವೈ.ರಾಘವೇಂದ್ರ ಭರವಸೆ ನೀಡಿದರು.
ಡಿಜಿಟಲ್ ಸುರಕ್ಷತೆ ಬೋಧಿಸಬೇಕು
ವೇಗವಾಗಿ ಬೆಳೆಯುತ್ತಿರುವ ಡಿಜಿಟಲ್ ತಂತ್ರಜ್ಞಾನದ ಜೊತೆಗೆ ಸೈಬರ್ ಸುರಕ್ಷತೆಯೂ ಮುಖ್ಯ. ಒಟಿಪಿ ವಂಚನೆ, ನಕಲಿ ಕರೆಗಳ ಬಗ್ಗೆ ಗ್ರಾಮೀಣ ಭಾಗದ ಮಹಿಳೆಯರು ಮತ್ತು ಹಿರಿಯ ನಾಗರಿಕರಲ್ಲಿ ಜಾಗೃತಿ ಮೂಡಿಸಬೇಕು. ತರಬೇತಿ ಮುಗಿಸಿ ಪದವಿ ಪಡೆದ ವಿವಿಧ ಭಾಗಗಳ ಸುಮಾರು 50 ಎಂಜಿನಿಯರ್‌ಗಳು ಡಿಜಿಟಲ್ ಸುರಕ್ಷತೆಯನ್ನೂ ಬೋಧಿಸಬೇಕು ಎಂದರು.
ಪಿಇಎಸ್ ಟ್ರಸ್ಟ್‌ನ ಸಿಒಒ ಸುಭಾಷ್ ಬಿ.ಆರ್. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಇಂಟರ್ನೆಟ್ ಸೊಸೈಟಿಯ ಹಿರಿಯ ವ್ಯವಸ್ಥಾಪಕ ಮರಿಯನ್ ಪ್ಲೆಟೊಸು, ಬೆಂಗಳೂರು ಚಾಪ್ಟರ್ ಅಧ್ಯಕ್ಷೆ ಡಾ. ಶೋಭಾ ಶಂಕರ್, ಉಪಾಧ್ಯಕ್ಷ ಆದರ್ಶ್ ಬಿ.ಯು, ಪಿಇಎಸ್ ಟ್ರಸ್ಟ್ ರಿಜಿಸ್ಟ್ರಾರ್ ಡಾ. ನಾಗರಾಜ್ ಆರ್, ಪ್ರಾಂಶುಪಾಲ ಡಾ. ಸ್ವಾಮಿ ಡಿ.ಆರ್, ಉಪ ಪ್ರಾಂಶುಪಾಲ ಡಾ. ಆರ್. ಶೇಖರ್, ಡಾ. ವಿಷ್ಣು ವಿ.ಎಂ ಉಪಸ್ಥಿತರಿದ್ದರು.