ಶಿವಮೊಗ್ಗ: ನಗರದಲ್ಲಿ ಫುಟ್ಪಾತ್ ಒತ್ತುವರಿ ತೆರವು ಕಾರ್ಯಾಚರಣೆಯನ್ನು ಮಹಾನಗರ ಪಾಲಿಕೆ ಸಿಬ್ಬಂದಿ ಹಾಗೂ ಸಂಚಾರ ಠಾಣೆ ಪೊಲೀಸರು ಮುಂದುವರಿಸಿದ್ದು, ಖಾಸಗಿ ಬಸ್ ನಿಲ್ದಾಣದ ಹೂವಿನ ಮಾರುಕಟ್ಟೆ ಪಕ್ಕದ ಪಾದಚಾರಿ ಮಾರ್ಗವನ್ನು ಭಾನುವಾರ ತೆರವುಗೊಳಿಸಿದರು.
ಅಶೋಕ ಸರ್ಕಲ್ನಿಂದ ಮಿಳಘಟ್ಟ ಸಂಪರ್ಕಿಸುವ ರಸ್ತೆಯ ಫುಟ್ಪಾತ್ಗಳ ಮೇಲೆ ಅನಧಿಕೃತವಾಗಿ ಅಂಗಡಿಗಳನ್ನು ಸ್ಥಾಪಿಸಲಾಗಿತ್ತು. ಇದರಿಂದಾಗಿ ಪಾದಚಾರಿಗಳ ಓಡಾಟಕ್ಕೆ ತೀವ್ರ ತೊಡಕಾಗಿತ್ತು. ನಗರದ ವಿವಿಧೆಡೆ ಹಮ್ಮಿಕೊಳ್ಳಲಾಗಿರುವ ಫುಟ್ಪಾತ್ ತೆರವು ಅಭಿಯಾನದ ಮುಂದುವರಿದ ಭಾಗವಾಗಿ ಇಂದು ಮಿಳಘಟ್ಟ ರಸ್ತೆಯಲ್ಲಿ ಕಾರ್ಯಾಚರಣೆ ನಡೆಸಲಾಗಿದ್ದು, ಮಳಿಗೆಗಳನ್ನು ಜೆಸಿಬಿ ಯಂತ್ರದ ಮೂಲಕ ಜಪ್ತಿ ಮಾಡಿ ರಸ್ತೆಯನ್ನು ಸುಗಮಗೊಳಿಸಲಾಯಿತು.

ಮುಂದಿನ ಶನಿವಾರದವರೆಗೆ ಗಡುವು
ಬಸ್ ನಿಲ್ದಾಣದ ಆವರಣಕ್ಕೆ ಹೊಂದಿಕೊಂಡಂತೆ ಇರುವ ಹೂವಿನ ಮಾರುಕಟ್ಟೆಯನ್ನು ಶಿವಪ್ಪನಾಯಕ ಪ್ರತಿಮೆ ಬಳಿಯ ಮಲ್ಟಿ ಲೆವೆಲ್ ಕಾರ್ ಪಾರ್ಕಿಂಗ್ ಕಟ್ಟಡದ ಮಳಿಗೆಗಳಿಗೆ ಸ್ಥಳಾಂತರ ಮಾಡುವಂತೆ ಸಂಚಾರ ಠಾಣೆ ಇನ್ಸ್ಪೆಕ್ಟರ್ ದೇವರಾಜ್ ಗಡುವು ನೀಡಿದ್ದಾರೆ.
‘ರಸ್ತೆ ಬದಿಯ ಹೂವಿನ ಅಂಗಡಿಗಳನ್ನೆಲ್ಲ ಮುಂದಿನ ಶನಿವಾರದೊಳಗೆ ಎಸ್ಎನ್ ಮಾರುಕಟ್ಟೆಗೆ ಕಡ್ಡಾಯವಾಗಿ ಸ್ಥಳಾಂತರಿಸಬೇಕು. ಆ ಅಂಗಡಿಗಳು ತೆರವುಗೊಂಡ ಜಾಗವನ್ನು ಮುಂದಿನ ಸೋಮವಾರದಿಂದ ಸಾರ್ವಜನಿಕ ದ್ವಿಚಕ್ರ ವಾಹನಗಳ ಪಾರ್ಕಿಂಗ್ ವ್ಯವಸ್ಥೆಗೆ ಕಾಯ್ದಿರಿಸಲಾಗುವುದು’ ಎಂದು ಇನ್ಸ್ಪೆಕ್ಟರ್ ದೇವರಾಜ್ ವ್ಯಾಪಾರಿಗಳಿಗೆ ತಿಳಿಸಿದರು.