ಶಿವಮೊಗ್ಗ: ನೀಟ್ ಪರೀಕ್ಷೆ ಅಕ್ರಮ ಹಾಗೂ ಪ್ರಶ್ನೆ ಪತ್ರಿಕೆ ಸೋರಿಕೆ ವಿರೋಧಿಸಿ ಜಿಲ್ಲಾ ಕಾಂಗ್ರೆಸ್ ವತಿಯಿಂದ ನಗರದಲ್ಲಿ ಪ್ರತಿಭಟನೆ ನಡೆಸಲಾಯಿತು. ಮಹಾವೀರ ವೃತ್ತದಲ್ಲಿ ಜಮಾಯಿಸಿದ ಕಾಂಗ್ರೆಸ್ ಕಾರ್ಯಕರ್ತರು ಕೇಂದ್ರ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ಬಿಜೆಪಿ ಕಚೇರಿಗೆ ದಿಢೀರ್ ಮುತ್ತಿಗೆ
ಪ್ರತಿಭಟನೆಯ ಬಳಿಕ ಮಹಾವೀರ ವೃತ್ತದಿಂದ ಏಕಾಏಕಿ ಓಡುತ್ತಾ ತೆರಳಿದ ಕಾಂಗ್ರೆಸ್ ಮುಖಂಡರು ಮತ್ತು ಕಾರ್ಯಕರ್ತರು ಶಿವಮೊಗ್ಗದ ಜಿಲ್ಲಾ ಬಿಜೆಪಿ ಕಚೇರಿಗೆ ಮುತ್ತಿಗೆ ಹಾಕಲು ಯತ್ನಿಸಿದರು. ಪೊಲೀಸರ ತಡೆ ನಡುವೆಯೂ ಬ್ಯಾರಿಕೇಡ್ ತಳ್ಳಿ ನುಗ್ಗಿದ ಪ್ರತಿಭಟನಾಕಾರರು, ಬಿಜೆಪಿ ಕಚೇರಿ ಆವರಣ ಪ್ರವೇಶಿಸಿದ್ದರು. ಈ ವೇಳೆ ಕಾಂಗ್ರೆಸ್ ಕಾರ್ಯಕರ್ತರನ್ನು ತಡೆಯಲು ಪೊಲೀಸರು ಹರಸಾಹಸ ಪಡಬೇಕಾಯಿತು. ನೂಕಾಟದಲ್ಲಿ ಬ್ಯಾರಿಕೇಡ್‌ಗಳು, ಪಾರ್ಕಿಂಗ್ ಮಾಡಿದ್ದ ಬೈಕ್‌ಗಳು ಕೆಳಗೆ ಬಿದ್ದವು.

ಪೊಲೀಸ್ ವಾಹನ ಏರಿದ ಕಾರ್ಯಕರ್ತ
ಪ್ರತಿಭಟನೆ ವೇಳೆ ಕಾಂಗ್ರೆಸ್ ಕಾರ್ಯಕರ್ತರೊಬ್ಬರು ಪೊಲೀಸ್ ವಾಹನದ ಮೇಲೆ ಹತ್ತಿ ಬಾವುಟ ಬೀಸಿದರು. ಇದಕ್ಕೆ ಆಕ್ರೋಶ ವ್ಯಕ್ತಪಡಿಸಿದ ಬಿಜೆಪಿ ಕಾರ್ಯಕರ್ತರು, ಡಿವೈಎಸ್ಪಿ ಶೀಲವಂತ್ ಜೊತೆ ವಾಗ್ವಾದ ನಡೆಸಿದರು. ಈ ವೇಳೆ ಪರಸ್ಪರ ತಳ್ಳಾಟ-ನೂಕಾಟ ಉಂಟಾಯಿತು. ಪರಿಸ್ಥಿತಿ ವಿಕೋಪಕ್ಕೆ ತಿರುಗುತ್ತಿದ್ದಂತೆ ಪೊಲೀಸರು ಪ್ರತಿಭಟನಾಕಾರರನ್ನು ವಶಕ್ಕೆ ಪಡೆದು ಕರೆದೊಯ್ದರು.
ಬಿಜೆಪಿ ಕಾರ್ಯಕರ್ತರ ಆಕ್ರೋಶ
ಮುತ್ತಿಗೆ ಯತ್ನದ ಹಿನ್ನೆಲೆ ಬಿಜೆಪಿ ಕಚೇರಿ ಬಳಿ ಬಿಜೆಪಿ ಮುಖಂಡರು ಹಾಗೂ ಕಾರ್ಯಕರ್ತರು ಜಮಾಯಿಸಿದ್ದರು. ಈ ವೇಳೆ ಕಚೇರಿಯ ಶಟರ್ ಎಳೆಯುವ ವಿಚಾರವಾಗಿ ಪೊಲೀಸರೊಂದಿಗೆ ವಾಗ್ವಾದ ನಡೆಸಿದ ಬಿಜೆಪಿ ಕಾರ್ಯಕರ್ತರು, ತಮ್ಮ ರಕ್ಷಣೆ ತಾವು ಮಾಡಿಕೊಳ್ಳುವುದಾಗಿ ತಿಳಿಸಿ ಆಕ್ರೋಶ ವ್ಯಕ್ತಪಡಿಸಿದರು.