ಶಿವಮೊಗ್ಗ: ದೇಶಾದ್ಯಂತ ಪಕ್ಷವನ್ನು ಮತ್ತಷ್ಟು ಬಲಪಡಿಸುವ ಉದ್ದೇಶದಿಂದ ಹಮ್ಮಿಕೊಂಡಿರುವ ಸಂಘಟನ್ ಸೃಜನ್ ಅಭಿಯಾನದ ಭಾಗವಾಗಿ ಶಿವಮೊಗ್ಗ ಜಿಲ್ಲಾ ಕಾಂಗ್ರೆಸ್ ಘಟಕದ ಅಧ್ಯಕ್ಷರ ಆಯ್ಕೆ ಪ್ರಕ್ರಿಯೆಗೆ ಶನಿವಾರ ಅಧಿಕೃತ ಚಾಲನೆ ನೀಡಲಾಗಿದೆ ಎಂದು ಎಐಸಿಸಿ ವೀಕ್ಷಕ ಶರತ್ ತಿಳಿಸಿದ್ದಾರೆ.
ನಗರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಅಧ್ಯಕ್ಷರ ಆಯ್ಕೆ ಪ್ರಕ್ರಿಯೆಯನ್ನು ಪಾರದರ್ಶಕವಾಗಿ ನಡೆಸಲಾಗುತ್ತಿದೆ. ಬಹುತೇಕ ರಾಜ್ಯಗಳಲ್ಲಿ ಇದು ಮುಕ್ತಾಯಗೊಂಡಿದೆ. ಕರ್ನಾಟಕ ಸೇರಿದಂತೆ ಕೆಲವೇ ರಾಜ್ಯಗಳಲ್ಲಿ ಬಾಕಿಯಿದ್ದು, ಜಿಲ್ಲೆಯ ಉಸ್ತುವಾರಿಯನ್ನು ತಮಗೆ ವಹಿಸಲಾಗಿದೆ ಎಂದರು.

ಜಿಲ್ಲೆಯ ಹಾಲಿ-ಮಾಜಿ ಸಂಸದರು, ಶಾಸಕರು, ಸ್ಥಳೀಯ ಜನಪ್ರತಿನಿಧಿಗಳು ಹಾಗೂ ತಳಮಟ್ಟದ ಕಾರ್ಯಕರ್ತರೊಂದಿಗೆ ಪ್ರತ್ಯೇಕ ಸಭೆ ನಡೆಸಿ ಅಭಿಪ್ರಾಯ ಸಂಗ್ರಹಿಸಿ ಎಐಸಿಸಿಗೆ ವರದಿ ಸಲ್ಲಿಸಲಾಗುವುದು. ಆಸಕ್ತರಿಂದ ಅರ್ಜಿ ಆಹ್ವಾನಿಸಲಾಗಿದ್ದು, ಯುವಕರು, ಮಹಿಳೆಯರು, ಅಲ್ಪಸಂಖ್ಯಾತರು ಹಾಗೂ ಎಸ್‌ಸಿ-ಎಸ್‌ಟಿ ಕಾರ್ಯಕರ್ತರಿಗೆ ಸಮಾನ ಅವಕಾಶ ಕಲ್ಪಿಸಲಾಗಿದೆ. ಸಾಮಾಜಿಕ ಜಾಲತಾಣಗಳ ಮೂಲಕವೂ ಅಭಿಪ್ರಾಯ ಸಂಗ್ರಹಿಸಲಾಗುತ್ತಿದ್ದು, ಮುಂದಿನ 12 ದಿನ ಶಿವಮೊಗ್ಗದಲ್ಲೇ ವಾಸ್ತವ್ಯ ಹೂಡಿ, ಹಿರಿಯ ನಾಯಕರೊಂದಿಗೆ ಚರ್ಚಿಸಿ ಆರು ಮಂದಿ ಸಂಭಾವ್ಯರ ಪಟ್ಟಿ ಅಂತಿಮಗೊಳಿಸಲಾಗುವುದು ಎಂದರು.
ಕೆಪಿಸಿಸಿ ವೀಕ್ಷಕರಾದ ಜ್ಯೋತಿ ಪಾಟೀಲ್, ಲೋಕೇಶ್ ನಾಯ್ಕ, ಜಿಲ್ಲಾಧ್ಯಕ್ಷ ಆರ್.ಪ್ರಸನ್ನಕುಮಾರ್, ಪ್ರಮುಖರಾದ ಕೆ.ಚೇತನ್ ಗೌಡ, ಜಿ.ಪಲ್ಲವಿ, ಶ್ವೇತಾ ಬಂಡಿ, ಆದರ್ಶ್ ಹುಂಚದಕಟ್ಟೆ, ಕವಿತಾ ಮತ್ತಿತರರಿದ್ದರು.