ಶಿವಮೊಗ್ಗ: ಪೊಲೀಸ್ ಇಲಾಖೆಯ ವಿವಿಧ ವೃಂದಗಳ 3,400 ಕಾನ್‌ಸ್ಟೆಬಲ್ ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದ ಸ್ಪರ್ಧಾತ್ಮಕ ಪರೀಕ್ಷೆಯನ್ನು ಆಗಸ್ಟ್ 2ರಂದು ನಗರದ 28 ಪರೀಕ್ಷಾ ಕೇಂದ್ರಗಳಲ್ಲಿ ನಡೆಸಲು ಅಗತ್ಯ ಸಿದ್ಧತೆಗಳನ್ನು ಕೈಗೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ಪ್ರಭುಲಿಂಗ ಕವಳಿಕಟ್ಟಿ ತಿಳಿಸಿದ್ದಾರೆ.➤ ಸುದ್ದಿಯ ಮುಂದಿನ 5 ಪ್ಯಾರಾಗಳು ಕೆಳಗಿವೆ.
ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಪೂರ್ವಸಿದ್ಧತಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಬೆಳಿಗ್ಗೆ 10.30ರಿಂದ ಮಧ್ಯಾಹ್ನ 12 ಗಂಟೆಯವರೆಗೆ ನಡೆಯಲಿರುವ ಈ ಪರೀಕ್ಷೆಗೆ ಒಟ್ಟು 10,737 ಅಭ್ಯರ್ಥಿಗಳು ಹಾಜರಾಗಲಿದ್ದು, ಪರೀಕ್ಷಾ ಕರ್ತವ್ಯಕ್ಕೆ ಸಿಬ್ಬಂದಿಯನ್ನು ನಿಯೋಜಿಸಿ ಕಟ್ಟುನಿಟ್ಟಿನ ಮಾರ್ಗಸೂಚಿ ನೀಡಲಾಗಿದೆ ಎಂದರು.

ಪರೀಕ್ಷೆಯು ಯಾವುದೇ ಗೊಂದಲವಿಲ್ಲದೆ ಸುಗಮವಾಗಿ ನಡೆಯಲು ಮುಖ್ಯ ಅಧೀಕ್ಷಕರು, ವೀಕ್ಷಕರು, ಮಾರ್ಗಾಧಿಕಾರಿಗಳು ಹಾಗೂ ವಿಶೇಷ ಜಾಗೃತ ದಳಗಳನ್ನು ರಚಿಸಲಾಗಿದ್ದು, ವಿವಿಧ ಇಲಾಖೆಗಳ ಅಧಿಕಾರಿಗಳಿಗೆ ಪ್ರತ್ಯೇಕ ಜವಾಬ್ದಾರಿ ವಹಿಸಲಾಗಿದೆ. ಅಲ್ಲದೆ, ಪರೀಕ್ಷಾ ಸಮಯದಲ್ಲಿ ವಿದ್ಯುತ್ ವ್ಯತ್ಯಯವಾಗದಂತೆ ಎಚ್ಚರಿಕೆ ವಹಿಸಲು ಮೆಸ್ಕಾಂ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ತಿಳಿಸಿದರು.
ಕಟ್ಟುನಿಟ್ಟಿನ ವಸ್ತ್ರಸಂಹಿತೆ, ನಿರ್ಬಂಧ
ಪರೀಕ್ಷೆಗೆ ಹಾಜರಾಗುವ ಅಭ್ಯರ್ಥಿಗಳು ಕಡ್ಡಾಯವಾಗಿ ವಸ್ತ್ರಸಂಹಿತೆ ಪಾಲಿಸಬೇಕು. ಯಾರು ಕೂಡ ಉದ್ದ ತೋಳಿನ ಅಂಗಿ ಹಾಗೂ ಶೂ ಧರಿಸಿ ಬರುವಂತಿಲ್ಲ. ಇದರೊಂದಿಗೆ ಮೊಬೈಲ್, ಸ್ಮಾರ್ಟ್‌ವಾಚ್, ಕ್ಯಾಲ್ಕುಲೇಟರ್, ಯಾವುದೇ ಎಲೆಕ್ಟ್ರಾನಿಕ್ ಉಪಕರಣಗಳು, ನೋಟ್ಸ್, ಬ್ಯಾಗ್ ಹಾಗೂ ಆಹಾರ ಪದಾರ್ಥಗಳನ್ನು ಪರೀಕ್ಷಾ ಕೇಂದ್ರದ ಒಳಗೆ ತರಲು ಸಂಪೂರ್ಣ ಅವಕಾಶವಿರುವುದಿಲ್ಲ ಎಂದು ಸ್ಪಷ್ಟಪಡಿಸಿದರು.
ನಿಷೇಧಾಜ್ಞೆ ಹಾಗೂ ಜಾಮರ್ ಅಳವಡಿಕೆ
ಪರೀಕ್ಷಾ ದಿನದಂದು ಕೇಂದ್ರಗಳಲ್ಲಿ ಜಾಮರ್‌ಗಳನ್ನು ಅಳವಡಿಸಲಾಗುವುದು. ಮುನ್ನೆಚ್ಚರಿಕೆ ಕ್ರಮವಾಗಿ ಪರೀಕ್ಷಾ ಕೇಂದ್ರಗಳ ಸುತ್ತಮುತ್ತಲಿನ 200 ಮೀಟರ್ ವ್ಯಾಪ್ತಿಯ ಪ್ರದೇಶವನ್ನು ನಿಷೇಧಿತ ಪ್ರದೇಶವೆಂದು ಘೋಷಿಸಿ ನಿಷೇಧಾಜ್ಞೆ ಜಾರಿಗೊಳಿಸಲಾಗುವುದು. ಜತೆಗೆ, ಕೇಂದ್ರಗಳ ಸಮೀಪವಿರುವ ಎಲ್ಲಾ ಜೆರಾಕ್ಸ್ ಮತ್ತು ಸೈಬರ್ ಕೇಂದ್ರಗಳನ್ನು ಪರೀಕ್ಷಾ ಅವಧಿಯಲ್ಲಿ ಮುಚ್ಚುವಂತೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು.
ಸಭೆಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿ. ನಿಖಿಲ್, ಹೆಚ್ಚುವರಿ ಜಿಲ್ಲಾಧಿಕಾರಿ ಅಭಿಷೇಕ್ ವಿ., ಜಿಲ್ಲಾ ಖಜಾನಾಧಿಕಾರಿ ಹೆಚ್.ಎಸ್. ಸಾವಿತ್ರಿ ಸೇರಿದಂತೆ ವಿವಿಧ ಇಲಾಖೆಗಳ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.