ಶಿವಮೊಗ್ಗ: ಸಂಚಾರ ದಟ್ಟಣೆ ನಿಯಂತ್ರಣ, ವಾಹನ ಸವಾರರು ಹಾಗೂ ಪಾದಚಾರಿಗಳ ಸುಗಮ ಸಂಚಾರಕ್ಕೆ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ನಗರದಲ್ಲಿ ಫುಟ್‌ಪಾತ್ ಒತ್ತುವರಿ ತೆರವು ಕಾರ್ಯಾಚರಣೆಯನ್ನು ಸಂಚಾರ ಪೊಲೀಸರು ಮತ್ತು ಮಹಾನಗರ ಪಾಲಿಕೆ ಸಿಬ್ಬಂದಿ ಮುಂದುವರೆಸಿದ್ದಾರೆ.➤ ಸುದ್ದಿಯ ಮುಂದಿನ 3 ಪ್ಯಾರಾಗಳು ಕೆಳಗಿವೆ.
ಮಾರ್ಗ 1: ಆರ್‌ಎಂಆರ್ ರಸ್ತೆ
ನಗರದ ಆರ್.ಎಂ.ಆರ್. ರಸ್ತೆಯಲ್ಲಿ ದ್ವಿಚಕ್ರ ವಾಹನಗಳ ಅಸ್ತವ್ಯಸ್ತ ನಿಲುಗಡೆಗೆ ಕಡಿವಾಣ ಹಾಕಲು ಸಂಚಾರ ಪೊಲೀಸರು ಹೊಸದಾಗಿ ಸೂಚನಾ ಫಲಕಗಳನ್ನು ಅಳವಡಿಸಿದರು. ಅಲ್ಲದೆ, ನಿಗದಿತ ಸ್ಥಳಗಳಲ್ಲಿ ಮಾತ್ರ ವಾಹನಗಳನ್ನು ಪಾರ್ಕಿಂಗ್ ಮಾಡುವಂತೆ ಸಾರ್ವಜನಿಕರಿಗೆ ಸೂಚಿಸಲಾಯಿತು. ಇದೇ ವೇಳೆ ರಸ್ತೆ ಬದಿ ಸಂಗ್ರಹವಾಗಿದ್ದ ಮಣ್ಣು ಹಾಗೂ ಇತರೆ ಅಡಚಣೆಗಳನ್ನು ಪಾಲಿಕೆ ಸಿಬ್ಬಂದಿ ನೆರವಿನಿಂದ ತೆರವುಗೊಳಿಸಿದರು.

ಮಾರ್ಗ 2: ಜೈಲ್ ರೋಡ್
ಮತ್ತೊಂದೆಡೆ, ಜೈಲ್ ಸರ್ಕಲ್‌ನಿಂದ ಲಕ್ಷ್ಮೀ ಟಾಕೀಸ್ ಸರ್ಕಲ್‌ವರೆಗಿನ ರಸ್ತೆಯಲ್ಲಿ ಫುಟ್ ಪಾತ್ ಒತ್ತುವರಿಯನ್ನು ಸಂಚಾರ ಪೊಲೀಸರು ತೆರವುಗೊಳಿಸಿದರು. ಮಳಿಗೆಗಳ ಮಾಲೀಕರು ಫುಟ್ ಪಾತ್ ಮೇಲೆ ಯಾವುದ ವಸ್ತುಗಳನ್ನು ಇಡುವಂತಿಲ್ಲ ಎಂದು ಸೂಚನೆ ನೀಡಲಾಯಿತು. ಅಲ್ಲದೆ, ಈ ಮಾರ್ಗದಲ್ಲಿ ಈಗಾಗಲೇ ಜಾರಿಯಲ್ಲಿರುವ ದಿನ ಬಿಟ್ಟು ದಿನ ಪಾರ್ಕಿಂಗ್ ವ್ಯವಸ್ಥೆಯ ನಿಯಮಗಳನ್ನು ಪಾಲಿಸುವಂತೆ ಸವಾರರಿಗೆ ಜಾಗೃತಿ ಮೂಡಿಸಲಾಯಿತು.
ಪಾದಚಾರಿ ಮಾರ್ಗ ಅತಿಕ್ರಮಣ ತೆರವು
ಎರಡು ರಸ್ತೆಯಲ್ಲಿ ಪಾದಚಾರಿ ಮಾರ್ಗಗಳನ್ನು ಒತ್ತುವರಿ ಮಾಡಿಕೊಂಡು ಜನರ ಓಡಾಟಕ್ಕೆ ತೊಂದರೆ ಉಂಟು ಮಾಡುತ್ತಿದ್ದ ಹಣ್ಣಿನ ಗಾಡಿಗಳು, ಕಟ್ಟಡ ನಿರ್ಮಾಣ ಸಾಮಗ್ರಿಗಳು ಹಾಗೂ ಅನಧಿಕೃತ ಅಂಗಡಿಗಳನ್ನು ತೆರವುಗೊಳಿಸಲಾಯಿತು. ಟ್ರಾಫಿಕ್ ಇನ್ಸ್‌ಪೆಕ್ಟರ್ ದೇವರಾಜ್ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಲಾಯಿತು.