ಹೊಳೆಹೊನ್ನೂರು: ಸಮೀಪದ ಇಟ್ಟಿಗೆಹಳ್ಳಿ ಗ್ರಾಮದ ಯುವಕರು ಮಂಗಳವಾರ ಸ್ವಂತ ಖರ್ಚಿನಲ್ಲಿ ರಸ್ತೆ ಗುಂಡಿಗಳಿಗೆ ಮಣ್ಣು ಸುರಿಸಿ ತಾತ್ಕಾಲಿಕವಾಗಿ ರಸ್ತೆ ದುರಸ್ತಿ ಮಾಡಿಕೊಳ್ಳುವ ಮೂಲಕ ಮಾದರಿಯಾಗಿದ್ದಾರೆ. ಅಲ್ಲದೆ ಜಿಲ್ಲಾಡಳಿತ, ಜನಪ್ರತಿನಿಧಿಗಳ ನಿರ್ಲಕ್ಷ್ಯದ ಧೋರಣೆಗೆ ಗ್ರಾಮಸ್ಥರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.➤ ಸುದ್ದಿಯ ಮುಂದಿನ 3 ಪ್ಯಾರಾಗಳು ಕೆಳಗಿವೆ.
ಭದ್ರಾವತಿ ತಾಲೂಕಿನ ಆನವೇರಿಯಿಂದ ಇಟ್ಟಿಗೆಹಳ್ಳಿಗೆ ಸಂಪರ್ಕ ಕಲ್ಪಿಸುವ 2.5 ಕಿ.ಮೀ. ಉದ್ದದ ರಸ್ತೆಯು ಬಹುತೇಕ ಕಡೆಗಳಲ್ಲಿ ಹದಗೆಟ್ಟು, ಬೃಹತ್ ಗುಂಡಿಗಳು ಬಿದ್ದು ಸಂಚಾರಕ್ಕೆ ಯೋಗ್ಯವಾಗಿರಲಿಲ್ಲ. ಈ ರಸ್ತೆಯನ್ನು ದುರಸ್ತಿಗೊಳಿಸುವಂತೆ ಗ್ರಾಮಸ್ಥರು ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳಿಗೆ ಹತ್ತಾರು ಬಾರಿ ಮನವಿ ಮಾಡಿದ್ದರೂ ಪ್ರಯೋಜನವಾಗಿರಲಿಲ್ಲ ಎಂದು ಸಾರ್ವಜನಿಕರು ದೂರಿದ್ದಾರೆ.

ರಸ್ತೆಯ ಹದೆಗೆಟ್ಟ ಸ್ಥಿತಿಯಿಂದಾಗಿ ದ್ವಿಚಕ್ರ ವಾಹನ ಸವಾರರು ಆಯತಪ್ಪಿ ಬಿದ್ದು ಗಾಯಗೊಂಡಿರುವ ನಿದರ್ಶನಗಳಿವೆ. ಪ್ರತಿದಿನ ಶಾಲೆಗೆ ತೆರಳುವ ಮಕ್ಕಳ ವಾಹನಗಳ ಚಾಲಕರು ಕೂಡ ಈ ಸಮಸ್ಯೆಯನ್ನು ಗ್ರಾಮಸ್ಥರ ಗಮನಕ್ಕೆ ತಂದಿದ್ದರು. ಇದರಿಂದ ಎಚ್ಚೆತ್ತ ಯುವಕರು, ಗ್ರಾಮ ಪಂಚಾಯಿತಿ ಮಾಜಿ ಸದಸ್ಯ ತಿಪ್ಪೇಶ್ ಹಾಗೂ ಗ್ರಾಮದ ಮುಖಂಡ ಈಶ್ವರಪ್ಪ ಅವರ ಸಹಕಾರ ಪಡೆದು ಟ್ರಾಕ್ಟರ್ ಮೂಲಕ ಗುಡ್ಡದ ಮಣ್ಣನ್ನು ತಂದು, ಗುದ್ದಲಿ-ಪಿಕಾಸಿ ಹಿಡಿದು ರಸ್ತೆ ಗುಂಡಿಗಳನ್ನು ಮುಚ್ಚುವ ಮೂಲಕ ತಾತ್ಕಾಲಿಕ ಪರಿಹಾರ ಕಂಡುಕೊಂಡಿದ್ದಾರೆ.
ಯುವಕರ ಈ ಸ್ವಯಂಪ್ರೇರಿತ ಸಾಮಾಜಿಕ ಕಾಳಜಿಯ ಕೆಲಸಕ್ಕೆ ಗ್ರಾಮಸ್ಥರು ಮೆಚ್ಚುಗೆ ವ್ಯಕ್ತಪಡಿಸಿದ್ದು, ಸಾಮಾಜಿಕ ಜಾಲತಾಣಗಳಲ್ಲೂ ಅಭಿನಂದನೆ ಸಲ್ಲಿಸಲಾಗುತ್ತಿದೆ. ಗುಂಡಿ ಮುಚ್ಚುವ ಕಾರ್ಯದಲ್ಲಿ ನೀರುಗಂಟಿ ಪರಸಪ್ಪ, ರವಿಕುಮಾರ್, ಸುನೀಲ್, ಮನು, ಮಲ್ಲೇಶ್, ದೇವು, ಪರಶುರಾಮ್, ಹನುಮಂತ, ಕಿರಣ್ ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು.