ಶಿವಮೊಗ್ಗದಲ್ಲಿ ಭಾರತ್‌ ಜೋಡೋ ಯುವ ಸಂಘ, ಪ್ರತಿ ಸಂಘಕ್ಕೆ ₹10 ಲಕ್ಷ, ಅರ್ಹತೆಗಳೇನು?

ಶಿವಮೊಗ್ಗ: ಯುವಜನರಲ್ಲಿ ಕ್ರೀಡೆ, ಸಂಸ್ಕೃತಿ, ವೈಜ್ಞಾನಿಕ ಮನೋಭಾವ ಹಾಗೂ ಸಾಮಾಜಿಕ ಸಾಮರಸ್ಯವನ್ನು ಉತ್ತೇಜಿಸುವ ಉದ್ದೇಶದಿಂದ ರಾಜ್ಯಾದ್ಯಂತ ಭಾರತ್ ಜೋಡೋ ಯುವ ಸಂಘಗಳ ಸ್ಥಾಪನೆಗೆ ಶಿವಮೊಗ್ಗ ಜಿಲ್ಲೆಯಲ್ಲಿ ಚಾಲನೆ ನೀಡಲಾಗಿದೆ ಎಂದು ಜಿಲ್ಲಾಧಿಕಾರಿ ಪ್ರಭುಲಿಂಗ ಕವಳಿಕಟ್ಟಿ ತಿಳಿಸಿದರು.➤ ಸುದ್ದಿಯ ಮುಂದಿನ 5 ಪ್ಯಾರಾಗಳು ಕೆಳಗಿವೆ.

ನಿಮ್ಮೂರ ಸುದ್ದಿ ಕೆಲವೇ ನಿಮಿಷದಲ್ಲಿ ಸಾವಿರ ಸಾವಿರ ಜನರನ್ನು ತಲುಪುತ್ತೆ!

ಶಿವಮೊಗ್ಗ ಜಿಲ್ಲೆಯ ಯಾವುದೇ ಊರಿನ ಸುದ್ದಿಯನ್ನು ನಮಗೆ ಕಳುಹಿಸಬಹುದು. ನಮ್ಮ ವಾಟ್ಸಪ್‌ ನಂಬರ್ 7411700200.

ನಮ್ಮ ಗ್ರೂಪ್‌ ಸೇರಿಲು ಇಲ್ಲಿ ಕ್ಲಿಕ್‌ ಮಾಡಿ

ಜಿಲ್ಲಾಡಳಿತ ಕಚೇರಿ ಸಭಾಂಗಣದಲ್ಲಿ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಪ್ರತಿ ಸಂಘಕ್ಕೆ ಪ್ರತಿ ವರ್ಷ ತಲಾ ₹10 ಲಕ್ಷ ಅನುದಾನ ನೀಡಿ ಈ ಯೋಜನೆಯನ್ನು ಜಾರಿಗೊಳಿಸಲಾಗುತ್ತಿದ್ದು, ಇದನ್ನು ಜಿಲ್ಲೆಯಲ್ಲಿ ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಬೇಕು ಎಂದರು.

Shimoga-DC-Prabhulinga-Kavalikatti

ನೋಂದಣಿ ಆ್ಯಪ್ ಬಿಡುಗಡೆ

ಆಯಾ ಸ್ಥಳೀಯ ಮತ್ತು ನಗರ ಸಂಸ್ಥೆಗಳ ವ್ಯಾಪ್ತಿಯಲ್ಲಿ ಯುವ ಸಂಘಗಳ ಸ್ಥಾಪನೆ ಕುರಿತು ತಕ್ಷಣದಿಂದಲೇ ಪ್ರಚಾರ ಕೈಗೊಳ್ಳಲು ಹಾಗೂ ಪ್ರಥಮ ಹಂತವಾಗಿ ಆಗಸ್ಟ್ 6 ರಂದು ಅಧಿಕೃತವಾಗಿ ನೋಂದಣಿ ಆ್ಯಪ್ ಬಿಡುಗಡೆ ಮಾಡಲು ಸಭೆಯಲ್ಲಿ ನಿರ್ಧರಿಸಲಾಯಿತು. ಆಗಸ್ಟ್‌ 15ರ ಒಳಗೆ ಎಲ್ಲ ಗ್ರಾಮ ಪಂಚಾಯತ್, ಪಟ್ಟಣ ಪಂಚಾಯತ್, ಪುರಸಭೆ, ನಗರಸಭೆ ಹಾಗೂ ಮಹಾನಗರ ಪಾಲಿಕೆಗಳ ವ್ಯಾಪ್ತಿಯಲ್ಲಿ ಕನಿಷ್ಠ 100 ಸದಸ್ಯರನ್ನೊಳಗೊಂಡ ಯುವ ಸಂಘಗಳನ್ನು ರಚನೆ ಮಾಡಲು ಜಿಲ್ಲಾಧಿಕಾರಿ ಸೂಚಿಸಿದರು.

ಎಲ್ಲೆಲ್ಲಿ ಎಷ್ಟು ಸಂಘಗಳು?

  • ಶಿವಮೊಗ್ಗ ಮಹಾನಗರ ಪಾಲಿಕೆ: 40 ಸಂಘಗಳು
  • ಭದ್ರಾವತಿ ನಗರಸಭೆ: 17 ಸಂಘಗಳು
  • ಸಾಗರ ನಗರಸಭೆ: 7 ಸಂಘಗಳು
  • ಶಿಕಾರಿಪುರ ಪುರಸಭೆ: 6 ಸಂಘಗಳು
  • ಆನವಟ್ಟಿ ಪಟ್ಟಣ ಪಂಚಾಯತ್: 5 ಸಂಘಗಳು
  • ಹೊಳೆಹೊನ್ನೂರು ಪಟ್ಟಣ ಪಂಚಾಯತ್: 4 ಸಂಘಗಳು
  • ತೀರ್ಥಹಳ್ಳಿ ಪಟ್ಟಣ ಪಂಚಾಯತ್: 4 ಸಂಘಗಳು
  • ಶಿರಾಳಕೊಪ್ಪ ಪಟ್ಟಣ ಪಂಚಾಯತ್: 3 ಸಂಘಗಳು
  • ಸೊರಬ ಪಟ್ಟಣ ಪಂಚಾಯತ್: 3 ಸಂಘಗಳು
  • ಜೋಗ್ ಕಾರ್ಗಲ್ ಪಟ್ಟಣ ಪಂಚಾಯತ್: 3 ಸಂಘಗಳು
  • ಹೊಸನಗರ ಪಟ್ಟಣ ಪಂಚಾಯತ್: 2 ಸಂಘಗಳು
  • ಜಿಲ್ಲೆಯ ಒಟ್ಟು ಗ್ರಾಮ ಪಂಚಾಯತ್‌ಗಳು: 262 ಸಂಘಗಳು

ಸದಸ್ಯತ್ವಕ್ಕೆ ಅರ್ಹತೆ ಮತ್ತು ನಿಯಮಗಳು:

ಸಂಘಗಳಲ್ಲಿ ಸದಸ್ಯರ ವಯೋಮಿತಿ 16 ರಿಂದ 35 ವರ್ಷಗಳ ಒಳಗಿರಬೇಕು. ಆಧಾರ್ ಕಾರ್ಡ್ ಕಡ್ಡಾಯವಾಗಿರುತ್ತದೆ. ಒಬ್ಬ ವ್ಯಕ್ತಿ ಕೇವಲ ಒಂದು ಸಂಘದಲ್ಲಿ ಮಾತ್ರ ನೋಂದಣಿಯಾಗಲು ಅವಕಾಶವಿರುತ್ತದೆ. ಸದಸ್ಯರು ಸಂಬಂಧಿಸಿದ ಸ್ಥಳೀಯ ಅಥವಾ ನಗರ ಸಂಸ್ಥೆ ವ್ಯಾಪ್ತಿಯಲ್ಲಿ ಕನಿಷ್ಠ 6 ತಿಂಗಳಿಂದ ವಾಸವಿರಬೇಕು.

ಈ ಯೋಜನೆಯನ್ನು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಮೂಲಕ ಅನುಷ್ಠಾನಗೊಳಿಸಲಾಗುತ್ತಿದೆ. ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ, ನಗರಾಭಿವೃದ್ಧಿ ಇಲಾಖೆ, ಕಂದಾಯ ಇಲಾಖೆ ಹಾಗೂ ಶಿಕ್ಷಣ ಇಲಾಖೆಗಳು ಪೂರ್ಣ ಸಹಕಾರ ನೀಡಲಿವೆ ಎಂದು ಜಿಲ್ಲಾಧಿಕಾರಿ ತಿಳಿಸಿದರು.

ಸಭೆಯಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಹೇಮಂತ್ ಎನ್., ಅಪರ ಜಿಲ್ಲಾಧಿಕಾರಿ ಅಭಿಷೇಕ್ ವಿ., ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ರೇಖ್ಯಾ ನಾಯ್ಕ್ ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.