ಶಿವಮೊಗ್ಗ ಲೈವ್.ಕಾಂ | ಶಿಕಾರಿಪುರ
ಸರ್ಕಾರಿ ಶಾಲೆ ಬಳಿ ಇಳಿಯಲಿದೆ ಹೆಲಿಕಾಪ್ಟರ್..! ಅದಕ್ಕಾಗಿ ಗ್ರಾಮಸ್ಥರೆ ನಿರ್ಮಿಸಿದ್ದಾರೆ ಹೆಲಿಪ್ಯಾಡ್..! ವಿದ್ಯಾರ್ಥಿಗಳಿಗೆ ದೊರೆಯಲಿದೆ ಆಗಸದಲ್ಲಿ ಹಾರುವ ಚಾನ್ಸ್.. ಸುದ್ದಿಯ ಮುಂದಿನ 6 ಪ್ಯಾರಾಗಳು ಕೆಳಗಿವೆ.!
ಶಿಕಾರಿಪುರ ತಾಲೂಕಿನ ಕಡೇನಂದಿಹಳ್ಳಿಯ 117 ವರ್ಷದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳ ಪಾಲಿನ ಕನಸು ನನಸಾಗುತ್ತಿದೆ. ಸ್ವಾತಂತ್ರ್ಯ ದಿನಾಚರಣೆಯ ಸಂಭ್ರಮವನ್ನು ಇತಿಹಾಸದಲ್ಲಿ ಉಳಿಯುವಂತೆ ಮಾಡಲು, ಶಾಲೆಯ ಹಿರಿಯ ವಿದ್ಯಾರ್ಥಿಗಳು ಮತ್ತು ಸರ್ಕಾರೇತರ ಸಂಸ್ಥೆಯೊಂದು ಹೆಲಿಕಾಪ್ಟರ್ ರೈಡ್ ಕಾರ್ಯಕ್ರಮ ಆಯೋಜಿಸಿದೆ.

ಕಡೇನಂದಿಹಳ್ಳಿಯ ಸರ್ಕಾರಿ ಶಾಲೆಯಲ್ಲಿ 112 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ಈ ಪೈಕಿ ಆಯ್ದ ಆರು ವಿದ್ಯಾರ್ಥಿಗಳು ಸ್ವಾತಂತ್ರ್ಯ ದಿನಾಚರಣೆಯಂದು ಹೆಲಿಕಾಪ್ಟರ್ ಹಾರಾಟದ ಅನುಭವ ಪಡೆಯಲಿದ್ದಾರೆ.
ಅಭಿವೃದ್ಧಿ ಜೊತೆಗೆ ವಿದ್ಯಾರ್ಥಿಗಳಿಗೆ ಸ್ಪೂರ್ತಿ
ಹಿರಿಯ ವಿದ್ಯಾರ್ಥಿಗಳ ಸಂಘ ಮತ್ತು ವಿಶ್ವಾಗ್ರಹ ಫೌಂಡೇಶನ್ ಎಂಬ ಸರ್ಕಾರೇತರ ಸಂಸ್ಥೆಯು ಶಾಲೆಯ ಅಭಿವೃದ್ಧಿಯಲ್ಲಿ ತೊಡಗಿಸಿಕೊಂಡಿದೆ. ಇದೇ ಸರ್ಕಾರೇತರ ಸಂಸ್ಥೆಯು ಈಗ ವಿದ್ಯಾರ್ಥಿಗಳಿಗೆ ಸ್ಪೂರ್ತಿ ತುಂಬಲು ಹೆಲಿಕಾಪ್ಟರ್ ಹಾರಾಟಕ್ಕೆ ವ್ಯವಸ್ಥೆ ಮಾಡಿದೆ.
ಶಾಲೆ ಬಳಿ ಹೆಲಿಪ್ಯಾಡ್ ರೆಡಿ
ವಿಶ್ವಾಗ್ರಹ ಫೌಂಡೇಶನ್ ಸಂಸ್ಥೆಯ ಪ್ರಮುಖರು ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಶಿಕಾರಿಪುರ ತಾಲೂಕು ಕಡೇನಂದಿಹಳ್ಳಿಗೆ ಆಗಮಿಸಲಿದ್ದಾರೆ. ಅವರು ಹೆಲಿಕಾಪ್ಟರ್‌ನಲ್ಲಿ ಆಗಮಿಸುವುದರಿಂದ ಗ್ರಾಮಸ್ಥರು ಮತ್ತು ದತ್ತು ಸಮಿತಿಯ ಸದಸ್ಯರು ಶಾಲೆ ಸಮೀಪದಲ್ಲಿಯೇ ಹೆಲಿಪ್ಯಾಡ್ ನಿರ್ಮಿಸಿದ್ದಾರೆ. ಹೆಲಿಕಾಪ್ಟರ್ ಲ್ಯಾಂಡಿಂಗ್‌ಗೆ ಜಿಲ್ಲಾಧಿಕಾರಿಯ ಅನುಮತಿಯನ್ನೂ ಪಡೆದುಕೊಂಡಿದ್ದಾರೆ.
ಆಕಾಶದಲ್ಲಿ ಪ್ರತಿಭಾವಂತರ ಹಾರಾಟ
‘ಹೆಲಿಕಾಪ್ಟರ್ ರೈಡ್‌ಗೆ ಆರು ವಿದ್ಯಾರ್ಥಿಗಳಿಗೆ ಮಾತ್ರ ಅವಕಾಶವಿದೆ. ಅವರನ್ನು ಆಯ್ಕೆ ಮಾಡುವ ಜವಾಬ್ದಾರಿಯನ್ನು ಶಿಕ್ಷಕರಿಗೆ ವಹಿಸಲಾಗಿದೆʼ ಎಂದು ಕಡೇನಂದಿಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಎಸ್‌ಡಿಎಂಸಿ ಅಧ್ಯಕ್ಷ ಕುಮಾರ್ ಮಟ್ಟಿಮನಿ ಅವರು ಶಿವಮೊಗ್ಗ ಲೈವ್.ಕಾಂಗೆ ತಿಳಿಸಿದರು.
ಶಾಲೆಯ ಪ್ರತಿ ತರಗತಿಯಿಂದ ಶೈಕ್ಷಣಿಕ ಮತ್ತು ಕ್ರೀಡಾ ಚಟುವಟಿಕೆಗಳಲ್ಲಿ ಮುಂಚೂಣಿಯಲ್ಲಿರುವ ಆರು ವಿದ್ಯಾರ್ಥಿಗಳನ್ನು ಹೆಲಿಕಾಪ್ಟರ್ ರೈಡ್‌ಗಾಗಿ ಆಯ್ಕೆ ಮಾಡಲಾಗಿದೆ. ಆಕಾಶದಿಂದ ತಮ್ಮೂರಿನ ಸೌಂದರ್ಯವನ್ನು ಕಣ್ತುಂಬಿಕೊಳ್ಳಲು ಈ ಪುಟಾಣಿಗಳು ಕಾತುರದಿಂದ ಕಾಯುತ್ತಿದ್ದಾರೆ.