ಶಿವಮೊಗ್ಗ ಲೈವ್.ಕಾಂ | ಶಿವಮೊಗ್ಗ
ಶಿವಮೊಗ್ಗ-ತೀರ್ಥಹಳ್ಳಿ ಬೈಪಾಸ್ ರಿಂಗ್ ರಸ್ತೆಯಲ್ಲಿ ದಂಪತಿ ತೆರಳುತ್ತಿದ್ದ ಬೈಕ್ ಅಡ್ಡಗಟ್ಟಿದ ದುಷ್ಕರ್ಮಿಗಳು, ಚಾಕುವಿನಿಂದ ಬೆದರಿಸಿ ನಗದು ಹಾಗೂ ಮೊಬೈಲ್ ಫೋನ್‌ಗಳನ್ನು ದರೋಡೆ ಮಾಡಿರುವ ಘಟನೆ ನಡೆದಿದೆ. ಸುದ್ದಿಯ ಮುಂದಿನ 2 ಪ್ಯಾರಾಗಳು ಕೆಳಗಿವೆ.
ಇರ್ಫಾನ್ ಮತ್ತು ಅವರ ಪತ್ನಿ ತಾಸೀನಾ ಬಾನು ಅವರು ಆಗಸ್ಟ್ 11ರ ರಾತ್ರಿ ತಮ್ಮ ಬೈಕ್‌ನಲ್ಲಿ ತೆರಳುತ್ತಿದ್ದರು. ಶಿವಮೊಗ್ಗ-ತೀರ್ಥಹಳ್ಳಿ ಹೈವೇ ರಿಂಗ್ ರಸ್ತೆ ಬಳಿ ಬೈಕ್ ನಿಲ್ಲಿಸಿ ಫೋನ್‌ನಲ್ಲಿ ಮಾತನಾಡುತ್ತಿದ್ದಾಗ, ಹಿಂದಿನಿಂದ ಬಂದ ಇನ್ನೋವಾ ಕಾರು ಇವರ ಬೈಕ್‌ಗೆ ಅಡ್ಡವಾಗಿ ನಿಲ್ಲಿಸಲಾಯಿತು. ಕಾರಿನಿಂದ ಇಳಿದ ನಾಲ್ವರು, ದಂಪತಿಗೆ ಚಾಕು ತೋರಿಸಿ ಬೆದರಿಸಿದ್ದಾರೆ ಎಂದು ಆರೋಪಿಸಲಾಗಿದೆ.

ಇರ್ಫಾನ್ ಬಳಿ ಇದ್ದ ರೆಡ್‌ಮಿ ಮೊಬೈಲ್ ಹಾಗೂ ತಾಸೀನಾ ಬಾನು ಅವರ ಬಳಿಯಿದ್ದ ಬ್ಯಾಗ್‌ನಲ್ಲಿದ್ದ ಸ್ನೇಹಿತನಿಗೆ ಕೊಡಬೇಕಿದ್ದ ₹35,000 ನಗದು ಮತ್ತು ಮತ್ತೊಂದು ಮೊಬೈಲ್ ಅನ್ನು ಬಲವಂತವಾಗಿ ಕಿತ್ತುಕೊಂಡಿದ್ದಾರೆ. ದುಷ್ಕರ್ಮಿಗಳು ದರೋಡೆ ಮಾಡುತ್ತಿದ್ದಂತೆ ಇರ್ಫಾನ್ ಅವರಲ್ಲಿ ಒಬ್ಬನನ್ನು ಹಿಡಿಯಲು ಯತ್ನಿಸಿದ್ದಾರೆ. ಆಗ ಆರೋಪಿ ಇರ್ಫಾನ್ ಮುಖಕ್ಕೆ ಗುದ್ದಿ ಕೆಳಗೆ ತಳ್ಳಿದ್ದಾನೆ. ತಕ್ಷಣ ನಾಲ್ವರು ಕಾರಿನಲ್ಲಿ ಪರಾರಿಯಾಗುವ ಯತ್ನದಲ್ಲಿ ಕಾರಿನ ಚಕ್ರ ಇರ್ಫಾನ್ ಎಡಗಾಲಿಗೆ ತಾಗಿದ್ದು, ಒಳಪೆಟ್ಟಾಗಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ನಂತರ ಸ್ಥಳಕ್ಕೆ ಬಂದ ಇರ್ಫಾನ್ ಸ್ನೇಹಿತ, ದಂಪತಿಯನ್ನು ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದಾರೆ. ಈ ಸಂಬಂಧ ತುಂಗಾ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.