ಶಿವಮೊಗ್ಗ: ಹಳೆಯ ಬೊಮ್ಮನಕಟ್ಟೆಯಲ್ಲಿ ಮನೆಯ ಬೀಗ ಮುರಿದು ಲಕ್ಷಾಂತರ ರೂಪಾಯಿ ಮೌಲ್ಯದ ಚಿನ್ನಾಭರಣ ಹಾಗೂ ನಗದು ಕಳ್ಳತನ ಮಾಡಲಾಗಿದೆ.
ಗಾರೆ ಕೆಲಸಗಾರ ರಾಜೇಶ್ ಎಂಬುವವರ ಮನೆಯಲ್ಲಿ ಘಟನೆ ನಡೆದಿದೆ. ರಾಜೇಶ್ ಮತ್ತು ಪತ್ನಿ ಸುಪ್ರೀತಾ ಅವರು ಎಂದಿನಂತೆ ಕೆಲಸಕ್ಕೆ ತೆರಳಿದ್ದರು. ಮಧ್ಯಾಹ್ನ ಪಕ್ಕದ ಮನೆಯವರು ಬಾಗಿಲಿನ ಬೀಗ ಮುರಿದಿರುವುದನ್ನು ಗಮನಿಸಿ ರಾಜೇಶ್‌ಗೆ ಫೋನ್ ಮೂಲಕ ಮಾಹಿತಿ ನೀಡಿದ್ದರು. ಮನೆಗೆ ಬಂದು ಪರಿಶೀಲಿಸಿದಾಗ, ಬೆಡ್‌ರೂಮ್‌ನಲ್ಲಿದ್ದ ಬೀರುವಿನ ಲಾಕರ್ ಒಡೆಯಲಾಗಿತ್ತು ಎಂದು ದೂರಿನಲ್ಲಿ ಆರೋಪಿಸಲಾಗಿದೆ. ಸುದ್ದಿಯ ಮುಂದಿನ 2 ಪ್ಯಾರಾಗಳು ಕೆಳಗಿವೆ.
ಏನೇನಲ್ಲ ಕಳ್ಳತನವಾಗಿದೆ?
₹1,90,000 ನಗದು, 24 ಗ್ರಾಂ ತೂಕದ ಒಂದು ಬಂಗಾರದ 3 ರಿಂಗ್ ಸರ, 5 ಗ್ರಾಂ ತೂಕದ ಒಂದು ಜೊತೆ ಬಂಗಾರದ ಕಿವಿಯೋಲೆ, 75 ಗ್ರಾಂ ತೂಕದ ಒಂದು ಜೊತೆ ಬೆಳ್ಳಿ ದೀಪ, 30 ಗ್ರಾಂ ತೂಕದ ಒಂದು ಜೊತೆ ಬೆಳ್ಳಿ ಕುಂಕುಮ ಬಟ್ಟಲು, 50 ಗ್ರಾಂ ತೂಕದ ಒಂದು ಬೆಳ್ಳಿಯ ಲೋಟ ಹಾಗೂ ₹10,000 ಮೌಲ್ಯದ ಒಪ್ಪೋ ಕಂಪನಿಯ ಎ59 ಮೊಬೈಲ್ ಕಳ್ಳತನವಾಗಿವೆ. ಒಟ್ಟು ₹4,23,099 ಮೌಲ್ಯದ ವಸ್ತುಗಳು ಕಳುವಾಗಿವೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

ಘಟನೆ ಸಂಬಂಧ ವಿನೋಬನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ.