ಶಿವಮೊಗ್ಗ ಜೈಲಿನಲ್ಲಿ ಒಂದು ಲಕ್ಷ ಮೌಲ್ಯದ ಉಪಕರಣ ಒಡೆದ ವಿಚಾರಣಾಧೀನ ಕೈದಿಗಳು

ಶಿವಮೊಗ್ಗ: ಸೊಗಾನೆ ಕೇಂದ್ರ ಕಾರಾಗೃಹದಲ್ಲಿ ವಿಚಾರಣಾಧೀನ ಕೈದಿಗಳು ಪ್ರಿಸನ್ ಕಾಲ್ ಸಿಸ್ಟಮ್ (ಪಿಸಿಎಲ್‌) ಉಪಕರಣದ ಧ್ವಂಸಗೊಳಿಸಿದ್ದಾರೆ. ಕಾರಾಗೃಹದ ಕುಮುದ್ವತಿ ವಿಭಾಗದಲ್ಲಿ ಕೃತ್ಯ ನಡೆದಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

ಜೈಲಿನಲ್ಲಿರುವ ವಿಚಾರಣಾಧೀನ ಕೈದಿಗಳು ತಮ್ಮ ಕುಟುಂಬದವರು ಮತ್ತು ವಕೀಲರ ಜೊತೆಗೆ ಮಾತನಾಡಲು ಪಿಸಿಎಸ್‌ ಬೂತ್ ಸ್ಥಾಪಿಸಲಾಗಿದೆ. ಇದರ ಒಳಗೆ ಪ್ರವೇಶಿಸಿದ ಐವರು ವಿಚಾರಣಾಧೀನ ಕೈದಿಗಳು, ಉಪಕರಣದ ಸ್ಕ್ರೀನ್ ಒಡೆದಿದ್ದಾರೆ. ಪ್ರತಿ ಪಿಸಿಎಸ್‌ ಉಪಕರಣದ ಮೌಲ್ಯ ₹1,64,295 ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

Shimoga-Central-Jail-Building

ವಿಚರಣಾಧೀನ ಕೈದಿಗಳಾದ ಅಶೋಕ, ಮಹಮ್ಮದ್ ಇಬ್ರಾಹಿಂ, ಸೂರ್ಯ, ತೇಜಸ್ ಹಾಗೂ ಸಂತೋಷ ಎಂಬುವವರು ಕೃತ್ಯ ಎಸಗಿದ್ದಾರೆ ಎಂದು ಆರೋಪಿಸಲಾಗಿದೆ. ಕಾರಾಗೃಹದ ಮುಖ್ಯ ಅಧೀಕ್ಷಕ ಡಾ. ರಂಗನಾಥ್.ಪಿ ಅವರು ನೀಡಿದ ದೂರಿನ ಮೇರೆಗೆ ತುಂಗಾನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.