ನೀರಿನಲ್ಲಿ ಅಡಗಿ ಕುಳಿತ ರೌಡಿಶೀಟರ್‌, ಸಿನಿಮೀಯ ರೀತಿಯಲ್ಲಿ ಹೆಡೆಮುರಿ ಕಟ್ಟಿದ ಭದ್ರಾವತಿ ಪೊಲೀಸ್

ನಿಮ್ಮೂರ ಸುದ್ದಿ ಕೆಲವೇ ನಿಮಿಷದಲ್ಲಿ ಸಾವಿರ ಸಾವಿರ ಜನರನ್ನು ತಲುಪುತ್ತೆ!

ಶಿವಮೊಗ್ಗ ಜಿಲ್ಲೆಯ ಯಾವುದೇ ಊರಿನ ಸುದ್ದಿಯನ್ನು ನಮಗೆ ಕಳುಹಿಸಬಹುದು. ನಮ್ಮ ವಾಟ್ಸಪ್‌ ನಂಬರ್ 7411700200.

ನಮ್ಮ ಗ್ರೂಪ್‌ ಸೇರಿಲು ಇಲ್ಲಿ ಕ್ಲಿಕ್‌ ಮಾಡಿ

ಭದ್ರಾವತಿ: ಮಹಾಭಾರತ ಯುದ್ದದ ಕೊನೆಯ ದಿನ ಪಾಂಡವರಿಂದ ತಪ್ಪಿಸಿಕೊಳ್ಳಲು ದುರ್ಯೋಧನನು ವೈಶಂಪಾಯನ ಸರೋವರದಲ್ಲಿ ಅಡಗಿ ಕುಳಿತಿದ್ದ. ಭದ್ರಾವತಿಯಲ್ಲಿ ರೌಡಿಶೀಟರ್‌ ಒಬ್ಬಾತ ಪೊಲೀಸರಿಂದ ತಪ್ಪಿಸಿಕೊಳ್ಳಲು ದುರ್ಯೋಧನನ ಹಾದಿ ಹಿಡಿದಿದ್ದ. ಆದರೆ ನೀರಿನ ಅಡಿ ಅಡಗಿ ಪೊಲೀಸರಿಗೆ ಚಳ್ಳೆ ಹಣ್ಣು ತಿನ್ನಿಸಬಹುದು ಎಂಬ ಆತನ ಲೆಕ್ಕಾಚಾರ ಉಲ್ಟಾ ಆಗಿದೆ. ಸುದ್ದಿಯ ಮುಂದಿನ 2 ಪ್ಯಾರಾಗಳು ಕೆಳಗಿವೆ.

Bhadravathi-New-Town-police-spot-rowdy-sheeter-hiding-underwater

ಯಾರು ಈ ಆರೋಪಿ?

ಭದ್ರಾವತಿಯ ರೌಡಿಶೀಟರ್‌ ದಿಲೀಪ್‌ ಅಲಿಯಾಸ್‌ ಕರಿಯಾ ಪೊಲೀಸರಿಂದ ತಪ್ಪಿಸಿಕೊಳ್ಳಲು ಹಳ್ಳದ ನೀರಿನಲ್ಲಿ ಅಡಿ ಅಡಗಿದ್ದ. ಈತನ ವಿರುದ್ಧ ಕಳ್ಳತನ, ಕೊಲೆ ಯತ್ನ ಸೇರಿ 16 ಪ್ರಕರಣಗಳಿವೆ. ಪ್ರಕರಣ ಒಂದರಲ್ಲಿ ಈತನ ವಿರುದ್ಧ ನ್ಯಾಯಾಲಯದಿಂದ ಮೂರು ಬಾರಿ ವಾರಂಟ್‌ ಜಾರಿಯಾಗಿತ್ತು. ಹೀಗಾಗಿ ಇಂದು ಅತನನ್ನು ಬಂಧಿಸಲು ನ್ಯೂ ಟೌನ್‌ ಪೊಲೀಸ್‌ ಠಾಣೆಯ ಸಿಬ್ಬಂದಿ ತೆರಳಿದ್ದರು.

ನೀರಿನಲ್ಲಿ ಅಡಗಿದ ರೌಡಿಶೀಟರ್‌

ಪೊಲೀಸರ ಬರುವಿಕೆ ತಿಳಿದು ದಿಲೀಪ್‌ ಪರಾರಿಯಾಗಿದ್ದ. ಭಂಡಾರಹಳ್ಳಿಯ ಹಳ್ಳದ ಬಳಿ ಈತ ಇರುವ ಕುರಿತು ಪೊಲೀಸರಿಗೆ ಮಾಹಿತಿ ಸಿಕ್ಕಿದ್ದರಿಂದ ಅಲ್ಲಿಗೆ ತೆರಳಿದರು. ಆದರೆ ಅಲ್ಲೆಲ್ಲು ರೌಡಿ ಶೀಟರ್‌ ದಿಲೀಪ್‌ ಕಾಣಿಸಲಿಲ್ಲ. ಹಾಗಾಗಿ ಆತನಿಗಾಗಿ ಹುಡುಕಾಟ ನಡೆಸಿದರು. ಈ ಸಂದರ್ಭ ಹಳ್ಳದಲ್ಲಿ ಕಳೆ ಸರಿದಿರುವುದು ಪೊಲೀಸರ ಗಮನಕ್ಕೆ ಬಂದಿತ್ತು. ಕೂಡಲೆ ಹಳ್ಳಕ್ಕೆ ಇಳಿದ ನ್ಯೂಟ್‌ ಟೌನ್‌ ಠಾಣೆ ಸಬ್‌ ಇನ್ಸ್‌ಪೆಕ್ಟರ್‌ ರಮೇಶ್‌ ಮತ್ತು ಸಿಬ್ಬಂದಿ ಪ್ರಸನ್ನ ಹುಡುಕಾಟ ನಡೆಸಿದರು.

ಈ ಸಂದರ್ಭ ನೀರಿನ ಅಡಿಯಿಂದ ಗುಳ್ಳೆ ಬರುವುದನ್ನು ಗಮನಿಸಿದ ಪೊಲೀಸರು ಸುತ್ತುವರೆದು, ರೌಡಿ ಶೀಟರ್‌ ದಿಲೀಪ್‌ ಅಲಿಯಾಸ್‌ ಕರಿಯಾನನ್ನು ಹಿಡಿದಿದ್ದಾರೆ. ಹಳ್ಳದಲ್ಲಿಯೇ ಆತನ ಕೈಗೆ ಕೋಳ ತೊಡಿಸಿದ ಪೊಲೀಸರು, ದಂಡೆ ಮೇಲೆ ಕರೆತಂದಿದ್ದಾರೆ. ನ್ಯೂ ಟೌನ್‌ ಠಾಣೆ ಪೊಲೀಸರ ಕಾರ್ಯಕ್ಕೆ ಜನ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.