ಶಿವಮೊಗ್ಗಕ್ಕೆ ವಂದೇ ಭಾರತ್‌ ರೈಲು, ಕ್ರಿಯಾ ಯೋಜನೆ ರೆಡಿ, ಯಾವ್ಯಾವ ಊರಿಗೆ ಸಂಪರ್ಕಿಸಲಿದೆ?

ರೈಲ್ವೆ ಸುದ್ದಿ: ಶಿವಮೊಗ್ಗ – ತಿರುಪತಿ ಮಧ್ಯೆ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ಆರಂಭಿಸಲು ರೈಲ್ವೆ ಮಂಡಳಿ ಸಕಾರಾತ್ಮಕವಾಗಿ ಸ್ಪಂದಿಸಿದೆ.

ತಿರುಪತಿ ಸಂಸದ ಮದ್ದಿಲಾ ಗುರುಮೂರ್ತಿ ಅವರ ಮನವಿಗೆ ನೈಋತ್ಯ ರೈಲ್ವೆ ಸ್ಪಂದಿಸಿದೆ. ತಿರುಪತಿ ಮತ್ತು ಶಿವಮೊಗ್ಗ ಮಧ್ಯೆ ವಂದೇ ಭಾರತ್‌ ರೈಲು ಆರಂಭಿಸಲು ಕ್ರಿಯಾ ಯೋಜನೆ ಸಿದ್ಧಪಡಿಸಿದೆ. ಬೆಂಗಳೂರು ಮಾರ್ಗವಾಗಿ ಈ ಎರಡು ನಗರಗಳನ್ನು ವಂದೇ ಭಾರತ್‌ ರೈಲು ಸಂಪರ್ಕಿಸುವ ಪ್ರಸ್ತಾವನೆ ಸಿದ್ದವಾಗಿದೆ.

Vande-Bharat-Train

ತಿರುಪತಿ ಸಂಸದನ ಹರ್ಷ

ತನ್ನ ಪ್ರಸ್ತಾವನೆಗೆ ರೈಲ್ವೆ ಇಲಾಖೆ ಸಕಾರಾತ್ಮಕವಾಗಿ ಸ್ಪಂದಿಸಿರುವುದಕ್ಕೆ ತಿರುಪತಿ ಸಂಸದ ಮದ್ದಿಲ ಗುರುಮೂರ್ತಿ ಹರ್ಷ ವ್ಯಕ್ತಪಡಿಸಿದ್ದಾರೆ. ಈ ಸಂಬಂಧ ಟ್ವೀಟ್‌ ಮಾಡಿರುವ ಅವರು, ರೈಲ್ವೆ ಇಲಾಖೆ ಸಚಿವ ಅಶ್ವಿನಿ ವೈಷ್ಣವ್‌ ಅವರಿಗೆ ಧ್ಯನವಾದ ತಿಳಿಸಿದ್ದಾರೆ.

ತಾಂತ್ರಿಕ ಪ್ರಕ್ರಿಯೆಗಳನ್ನು ಶೀಘ್ರ ಪೂರ್ಣಗೊಳಿಸಿ ವಂದೇ ಭಾರತ್‌ ರೈಲು ಸೇವೆ ಆರಂಭಿಸಬೇಕು. ಹೊಸ ರೈಲು ಸಂಪರ್ಕದಿಂದ ಶಿವಮೊಗ್ಗ, ಬೆಂಗಳೂರು ಮತ್ತು ತಿರುಪತಿ ನಡುವೆ ಸಂಪರ್ಕ ಇನ್ನಷ್ಟು ಗಟ್ಟಿಗೊಳ್ಳಲಿದೆ. ಇದರಿಂದ ಯಾತ್ರಾರ್ಥಿಗಳು, ವಿದ್ಯಾರ್ಥಿಗಳು, ರೋಗಿಗಳು ಹಾಗೂ ಇತರ ಪ್ರಯಾಣಿಕರಿಗೆ ಅನುಕೂಲ ಆಗಲಿದೆ.

– ಮದ್ದಿಲ ಗುರುಮೂರ್ತಿ, ತಿರುಪತಿ ಸಂಸದ

ಶಿವಮೊಗ್ಗ MPಯಿಂದಲು ಮನವಿ

ಶಿವಮೊಗ್ಗಕ್ಕೆ ವಂದೇ ಭಾರತ್‌ ರೈಲು ಆರಂಭಿಸುವಂತೆ ಮಲೆನಾಡಿಗಲು ಬಹು ಸಮಯದಿಂದ ಕೇಂದ್ರ ಸರ್ಕಾರವನ್ನು ಒತ್ತಾಯಿಸುತ್ತಿದ್ದರು. ಶಿವಮೊಗ್ಗ ಸಂಸದ ಬಿ.ವೈ.ರಾಘವೇಂದ್ರ ಅವರು ಈ ಸಂಬಂಧ ರೈಲ್ವೆ ಇಲಾಖೆಗೆ ಮನವಿ ಸಲ್ಲಿಸಿದ್ದರು. ಹುಬ್ಬಳ್ಳಿಯಲ್ಲಿ ನಡೆದ ರೈಲ್ವೆ ಇಲಾಖೆಯ ಹಿರಿಯ ಅಧಿಕಾರಿಗಳ ಸಭೆಯಲ್ಲಿಯು ಮನವಿ ಸಲ್ಲಿಸಿದ್ದರು. ಆಗಲು ರೈಲ್ವೆ ಇಲಾಖೆ ಪೂರಕವಾಗಿ ಸ್ಪಂದಿಸಿತ್ತು.

ಇದೀಗ ಶಿವಮೊಗ್ಗ – ಬೆಂಗಳೂರು – ತಿರುಪತಿ ಮಾರ್ಗದಲ್ಲಿ ವಂದೇ ಭಾರತ್‌ ರೈಲು ಸೇವೆ ಆರಂಭಿಸಲು ಕ್ರಿಯಾ ಯೋಜನೆ ಸಿದ್ದವಾಗಿರುವುದು ಮಲೆನಾಡಿಗರಿಗೆ ಖುಷಿ ತಂದಿದೆ. ಶಿವಮೊಗ್ಗ – ಬೆಂಗಳೂರು ಮಧ್ಯೆ ಓಡಾಡುವವರಿಗೆ ಈ ರೈಲು ಅನುಕೂಲವಾಗಲಿದೆ.