ಶಿವಮೊಗ್ಗ: ಕೆಎಸ್‌ಆರ್‌ಟಿಸಿ ಬಸ್ ಮತ್ತು ದ್ವಿಚಕ್ರ ವಾಹನದ ನಡುವೆ ಅಪಘಾತ ಸಂಭವಿಸಿದ್ದು, ದಂಪತಿ ಗಾಯಗೊಂಡಿದ್ದಾರೆ. ಹರಿಗೆ ಬಳಿ ಭದ್ರಾವತಿ ಮುಖ್ಯ ರಸ್ತೆಯಲ್ಲಿ ಘಟನೆ ಸಂಭವಿಸಿದೆ.
ನಿದಿಗೆಯ ಮರಿಯಮ್ಮ ಕಾಲೋನಿಯ ಲಕ್ಷ್ಮಣ್ ಹಾಗೂ ಮಹಾಲಕ್ಷ್ಮಿ ದಂಪತಿ ದ್ವಿಚಕ್ರ ವಾಹನದಲ್ಲಿ ತೆರಳುತ್ತಿದ್ದರು. ಈ ವೇಳೆ ಎಂಆರ್‌ಎಸ್ ಸರ್ಕಲ್ ಕಡೆಯಿಂದ ಬಂದ ಕೆಎಸ್‌ಆರ್‌ಟಿಸಿ ಬಸ್ ಚಲಿಸುತ್ತಿದ್ದ ದ್ವಿಚಕ್ರ ವಾಹನಕ್ಕೆ ಹಿಂಬದಿಯಿಂದ ಡಿಕ್ಕಿ ಹೊಡೆದಿದೆ ಎಂದು ಆರೋಪಿಸಲಾಗಿದೆ. ಘಟನೆಯಲ್ಲಿ ದಂಪತಿ ಬೈಕ್‌ನಿಂದ ಕೆಳಗೆ ಬಿದ್ದಿದ್ದು, ಲಕ್ಷ್ಮಣ್ ಅವರಿಗೆ ತರಚಿದ ಗಾಯಗಳಾಗಿವೆ.

ಮಹಾಲಕ್ಷ್ಮಿ ಅವರ ತಲೆಗೆ ತೀವ್ರ ಪೆಟ್ಟುಬಿದ್ದು ಪ್ರಜ್ಞಾಹೀನ ಸ್ಥಿತಿಗೆ ತಪಿತ್ತು. ಕೂಡಲೆ ಅವರನ್ನು ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ಮ್ಯಾಕ್ಸ್ ಆಸ್ಪತ್ರೆಯ ಐಸಿಯುನಲ್ಲಿರಿಸಲಾಗಿದೆ. ಸ್ಕ್ಯಾನ್ ವೇಳೆ ಮಹಾಲಕ್ಷ್ಮಿ ಅವರ ಮೆದುಳಿನಲ್ಲಿ ರಕ್ತ ಹೆಪ್ಪುಗಟ್ಟಿರುವುದು ತಿಳಿದುಬಂದಿದೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ಬಸ್ ಚಾಲಕನ ವಿರುದ್ಧ ಶಿವಮೊಗ್ಗ ಪೂರ್ವ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.