ಶಿವಮೊಗ್ಗ: ನಗರದ ಸೇತುವೆ ಮೇಲಿನಿಂದ ಯುವತಿಯೊಬ್ಬಳು ತುಂಗಾ ನದಿಗೆ ಜಿಗಿದಿದ್ದಾರೆ. ಅದೃಷ್ಟವಶಾತ್ ಆಕೆಯನ್ನು ರಕ್ಷಿಸಲಾಗಿದೆ.
19 ವರ್ಷದ ಯುವತಿಯೊಬ್ಬರು (ಹೆಸರು, ವಿಳಾಸ ಗೌಪ್ಯ) ಇಂದು ಸಂಜೆ ರೈಲ್ವೆ ಸೇತುವೆ ಮೇಲಿನಿಂದ ತುಂಗಾ ನದಿಗೆ ಹಾರಿದ್ದಾರೆ. ನದಿಯಲ್ಲಿ ನೀರಿನ ಹರಿವು ಕಡಿಮೆ ಇದ್ದು, ಆಕೆಯು ಬಂಡೆಯೊಂದರ ಬಳಿ ಗಿಡಗಳ ಆಸರೆಯಲ್ಲಿ ನದಿ ಮಧ್ಯೆ ನಿಂತಿದ್ದರು. ವಿಷಯ ತಿಳಿದು ಅಗ್ನಿಶಾಮಕ ಸಿಬ್ಬಂದಿ ರಬ್ಬರ್ ಬೋಟ್ ಬಳಸಿ ಯುವತಿಯನ್ನು ರಕ್ಷಿಸಿದ್ದಾರೆ.

ಸದ್ಯ ಯುವತಿಯನ್ನು ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಆಕೆಗೆ ಪ್ರಾಥಮಿಕ ಚಿಕಿತ್ಸೆ ನೀಡಲಾಗಿದೆ. ಕೋಟೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಕಳೆದ ಎರಡು ತಿಂಗಳಲ್ಲಿ ತುಂಗಾ ನದಿಯಲ್ಲಿ ಮೂವರು ತೇಲಿ ಹೋಗಿದ್ದಾರೆ. ತುಂಗಾ ನದಿಯಲ್ಲಿ ನೀರಿನ ಹರಿವು ಹೆಚ್ಚಿದ್ದ ಸಂದರ್ಭ ಹೊನ್ನಾಳಿ ಮೂಲದ ಮಹಿಳೆಯೊಬ್ಬರು ದಂಡೆ ಮೇಲೆ ಮೊಬೈಲ್ ಇಟ್ಟು, ತುಂಗಾ ನದಿಗೆ ಹಾರಿದ್ದರು. ಶೋಧ ಕಾರ್ಯ ನಡೆಸಿದರು ಆಕೆ ಪತ್ತೆಯಾಗಿಲ್ಲ. ಕಳೆದ ತಿಂಗಳು ತಾಯಿ ಮತ್ತು ಮೂರು ಮಕ್ಕಳು ನದಿಗೆ ಹಾರಿದ್ದರು. ತಾಯಿ ಮತ್ತು ಮಗುವನ್ನು ರಕ್ಷಿಸಲಾಗಿತ್ತು. ಇಬ್ಬರು ಹೆಣ್ಣು ಮಕ್ಕಳು ನೀರಿನಲ್ಲಿ ಕೊಚ್ಚಿ ಹೋಗಿದ್ದು, ಈತನ ಅವರ ಸುಳಿವು ಕೂಡ ಸಿಕ್ಕಿಲ್ಲ.