ಹಿಂದೂ ಮಹಾಸಭಾ ಗಣಪತಿ, AI ಹಾಡು ರಿಲೀಸ್‌, ಸೆ.14ರಿಂದ ಏನೇನು ಕಾರ್ಯಕ್ರಮಗಳಿವೆ?

ಶಿವಮೊಗ್ಗ: ವೀರ ಸಾವರ್ಕರ್ ಹಿಂದೂ ಸಂಘಟನಾ ಮಹಾಮಂಡಳಿ ವತಿಯಿಂದ 82ನೇ ವರ್ಷದ ಗಣೇಶೋತ್ಸವವನ್ನು ಸೆ.14ರಿಂದ 25ರವರೆಗೆ ವಿವಿಧ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಅದ್ಧೂರಿಯಾಗಿ ಆಚರಿಸಲಾಗುವುದು ಎಂದು ರಾಜ್ಯ ಬ್ರಾಹ್ಮಣ ಮಹಾ ಮಂಡಳಿ ನಿರ್ದೇಶಕ ವಿ.ಎಂ. ಮಾಲತೇಶ್ ತಿಳಿಸಿದರು.

ಪತ್ರಿಕಾ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 1945ರಿಂದ ಹಿಂದೂ ಸಂಘಟನಾ ಮಹಾಮಂಡಳಿಯ ವತಿಯಿಂದ ಗಣೇಶೋತ್ಸವ ಆಚರಿಸಲಾಗುತ್ತಿದೆ. 82ನೇ ವರ್ಷದ ಗಣೇಶೋತ್ಸವಕ್ಕೆ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ ಎಂದರು.

Hindu-Mahasabha-Ganesha-AI-Song-released

ಸೆ.14ರಂದು ಬೆಳಿಗ್ಗೆ 11.30ಕ್ಕೆ ಕೋಟೆ ಶ್ರೀ ಭೀಮೇಶ್ವರ ದೇವಸ್ಥಾನದಲ್ಲಿ ಶ್ರೀ ವರಸಿದ್ಧಿವಿನಾಯಕ ಸ್ವಾಮಿಯ ಪ್ರತಿಷ್ಠಾಪನೆ ನೆರವೇರಲಿದೆ. ಸೆ.14ರಿಂದ ಪ್ರತಿದಿನ ಸಂಜೆ 7 ಗಂಟೆಗೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ ಎಂದು ತಿಳಿಸಿದರು.

ಯಾವ್ಯಾವ ದಿನ ಏನೇನು ಕಾರ್ಯಕ್ರಮ?

ಸೆ.14ರಂದು ಶ್ರೀ ಮಹಾಗಣಪತಿ ಪ್ರತಿಷ್ಠಾಪನೆ ನಡೆಯಲಿದೆ. ಸೆ.15ರಂದು ಸ್ನೇಹ ಸಮ್ಮಿಲನ ಕಲಾತಂಡದಿಂದ ಸುಗಮ ಸಂಗೀತ ಕಾರ್ಯಕ್ರಮ ನಡೆಯಲಿದೆ. ರೂಪಾ ಕರಿಬಸಯ್ಯ ಹಾಗೂ ಶ್ಯಾಮಲಾ ಸತೀಶ ಆಯೋಜಕರಾಗಿದ್ದಾರೆ. ಸೆ.16ರಂದು ಶ್ರೀ ಮಹಾಗಣಪತಿ ಯಕ್ಷಗಾನ ಬಳಗದಿಂದ ಪೌರಾಣಿಕ ಯಕ್ಷಗಾನ ನಡೆಯಲಿದೆ. ಸೆ.17ರಂದು ರಾಜಶೇಖರ್ ಮತ್ತು ಸಂಗಡಿಗರಿಂದ ರಸಮಂಜರಿ ಕಾರ್ಯಕ್ರಮ ನಡೆಯಲಿದೆ ಎಂದರು.

ಸೆ.18ರಂದು ಯಕ್ಷಾನುಗ್ರಹ ಸಂಸ್ಕೃತಿ ಸಂವರ್ಧನಾ ಸಭಾದಿಂದ ಇಂದ್ರಜಿತು ಕಾಳಗ ಯಕ್ಷಗಾನ. ಸೆ.19ರಂದು ಚಲನಚಿತ್ರ ನಟರು ಹಾಗೂ ಜಾನಪದ ಕಲಾವಿದರಾದ ಶ್ರೀ ಗುರುರಾಜ ಹೊಸಕೋಟೆ ತಂಡದಿಂದ ಜಾನಪದ ಸಂಭ್ರಮ ಕಾರ್ಯಕ್ರಮ ನಡೆಯಲಿದೆ. ಸೆ.20ರಂದು ಯಕ್ಷಸಮೂಹ ಯಕ್ಷಕಲಾ ಪ್ರತಿಷ್ಠಾನದ ಕೆಳಕುಂಜಾಲು–ನೀಲಾವರ ಇವರಿಂದ ಪೌರಾಣಿಕ ಯಕ್ಷಗಾನ ನಡೆಯಲಿದೆ ಎಂದರು.

ಸೆ.21ರಂದು ಹಾವೇರಿಯ ಶಾರ್ವರೀಶ ನಾಟ್ಯಕೇಂದ್ರ ಹಾಗೂ ಶೃತಿ ಜೋಷಿ ಮತ್ತು ತಂಡದಿಂದ ಭರತನಾಟ್ಯ ಪ್ರದರ್ಶನ ನಡೆಯಲಿದೆ. ಸೆ.22ರಂದು ಪುಷ್ಪಲತಾ ಮತ್ತು ಸಂಗಡಿಗರಿಂದ ಸುಗಮ ಸಂಗೀತ ಕಾರ್ಯಕ್ರಮ ನಡೆಯಲಿದೆ. ಸೆ.23ರಂದು ಶ್ರೀ ಸಿದ್ಧಿವಿನಾಯಕ ಯಕ್ಷಗಾನ ನಾಟ್ಯ ಸಂಘದಿಂದ ಭಸ್ಮಾಸುರ ಮೋಹಿನಿ ಯಕ್ಷಗಾನ ಪ್ರದರ್ಶನಗೊಳ್ಳಲಿದೆ. ಸೆ.24ರಂದು ವೀರ ಶಿವಮೂರ್ತಿ ಅವರ ಪುಣ್ಯಸ್ಮರಣೆ, ಮಹಾ ಮಂಗಳಾರತಿ ಹಾಗೂ ಪ್ರಸಾದ ವಿನಿಯೋಗ ನಡೆಯಲಿದೆ. ಸೆ.25ರಂದು ಶುಕ್ರವಾರ ಬೆಳಿಗ್ಗೆ 9.30ಕ್ಕೆ ಶ್ರೀ ವರಸಿದ್ಧಿವಿನಾಯಕ ಸ್ವಾಮಿಯ ರಾಜಬೀದಿ ಉತ್ಸವ ಹಾಗೂ ವಿಸರ್ಜನೆ ನಡೆಯಲಿದೆ ಎಂದರು.

AI ನೆರವಿನಿಂದ ಭಕ್ತಿಗೀತೆ

ಹಿಂದೂ ಸಂಘಟನಾ ಮಹಾಮಂಡಳಿ ಆಶ್ರಯದಲ್ಲಿ ಸಾಹಿತಿ ರಾಮ್ ಕದಮ್ ಅವರು ರಚಿಸಿದ ‘ಕೇಸರಿ ಧ್ವಜ ವಿಹಾರಿ ಮಹಾ ಗಣಪತಿ–ಗೀತನಮನ ಮೋದಗಣಪ’ ಎಂಬ AI ಮೂಲಕ ಸೃಷ್ಟಿಸಲಾದ ಭಕ್ತಿಗೀತೆಯನ್ನು ಪತ್ರಿಕಾ ಭವನದಲ್ಲಿ ಬಿಡುಗಡೆ ಮಾಡಲಾಯಿತು.

ಗಣಪತಿಯ ಮಹಿಮೆ, ಭಕ್ತಿಭಾವ ಹಾಗೂ ಹಿಂದೂ ಧಾರ್ಮಿಕ ಪರಂಪರೆಯನ್ನು ಪ್ರತಿಬಿಂಬಿಸುವ ಉದ್ದೇಶದಿಂದ ಗೀತೆಯನ್ನು ರಚಿಸಲಾಗಿದೆ. ಗಣೇಶೋತ್ಸವದ ಸಂದರ್ಭ ಭಕ್ತರಲ್ಲಿ ಭಕ್ತಿ ಹಾಗೂ ಉತ್ಸಾಹ ಮೂಡಿಸುವ ಉದ್ದೇಶದಿಂದ ಸಾಹಿತ್ಯವನ್ನು ರಚಿಸಿ, ಕೃತಕ ಬುದ್ಧಿಮತ್ತೆ ತಂತ್ರಜ್ಞಾನದ ನೆರವಿನಿಂದ ಸಂಗೀತ ಮತ್ತು ಗಾಯನ ರೂಪ ನೀಡಲಾಗಿದೆ. ಸಾಂಪ್ರದಾಯಿಕ ಭಕ್ತಿಗೀತೆಗೆ ಆಧುನಿಕ ತಂತ್ರಜ್ಞಾನದ ಸ್ಪರ್ಶ ನೀಡಿರುವುದು ಗೀತೆಯ ವಿಶೇಷತೆ.

– ರಾಮ್ ಕದಮ್, ಗೀತೆಯ ರಚನಾಕಾರ

ಪತ್ರಿಕಾಗೋಷ್ಠಿಯಲ್ಲಿ ಹಿಂದೂ ಸಂಘಟನಾ ಮಹಾ ಮಂಡಳಿ ಸಂಚಾಲಕ ದತ್ತಾತ್ರೇಯ, ನಿರ್ದೇಶಕ ಚಂದ್ರಶೇಖರ ಇದ್ದರು.

ನಿಮ್ಮೂರ ಸುದ್ದಿ ಕೆಲವೇ ನಿಮಿಷದಲ್ಲಿ ಸಾವಿರ ಸಾವಿರ ಜನರನ್ನು ತಲುಪುತ್ತೆ!

ಶಿವಮೊಗ್ಗ ಜಿಲ್ಲೆಯ ಯಾವುದೇ ಊರಿನ ಸುದ್ದಿಯನ್ನು ನಮಗೆ ಕಳುಹಿಸಬಹುದು. ನಮ್ಮ ವಾಟ್ಸಪ್‌ ನಂಬರ್ 7411700200.

ನಮ್ಮ ಗ್ರೂಪ್‌ ಸೇರಿಲು ಇಲ್ಲಿ ಕ್ಲಿಕ್‌ ಮಾಡಿ