ಶಿವಮೊಗ್ಗ: ಸಚಿವ ಮಧು ಬಂಗಾರಪ್ಪ ಅವರು ಜಿಲ್ಲಾ ಮೆಗ್ಗಾನ್ ಆಸ್ಪತ್ರೆ ಆವರಣದಲ್ಲಿರುವ ಹೃದ್ರೋಗ ಆಸ್ಪತ್ರೆಗೆ ಇಂದು ದಿಢೀರ್ ಭೇಟಿ ನೀಡಿ, ಆಸ್ಪತ್ರೆಯ ಕಾರ್ಯವೈಖರಿ ಹಾಗೂ ವೈದ್ಯಕೀಯ ಸೌಕರ್ಯ ಪರಿಶೀಲಿಸಿದರು.
ಆಸ್ಪತ್ರೆಯಲ್ಲಿ ಏನೇನು ಪರಿಶೀಲಿಸಿದರು?
ಅತ್ಯಾಧುನಿಕ ವೈದ್ಯಕೀಯ ತಂತ್ರಜ್ಞಾನ ಬಳಸಿ ವೈಜ್ಞಾನಿಕವಾಗಿ ವಿನ್ಯಾಸಗೊಳಿಸಲಾದ ನಾಲ್ಕು ಮಾಡ್ಯುಲರ್ ಶಸ್ತ್ರಚಿಕಿತ್ಸಾ ಕೊಠಡಿಯನ್ನು ಹಾಗೂ ಕ್ಯಾಥ್ಲ್ಯಾಬ್ ಸೌಕರ್ಯವನ್ನು ಸಚಿವ ಮಧು ಬಂಗಾರಪ್ಪ ವೀಕ್ಷಿಸಿದರು. ಅಲ್ಲಿನ ಉಪಕರಣಗಳ ಗುಣಮಟ್ಟ ಹಾಗೂ ಲಭ್ಯವಿರುವ ಮೂಲಸೌಕರ್ಯ ಕುರಿತು ಮಾಹಿತಿ ಪಡೆದರು.

ಹೃದ್ರೋಗ ವಿಭಾಗದ ಮುಖ್ಯಸ್ಥರು, ವಿಶೇಷ ಅಧಿಕಾರಿಗಳು ಹಾಗೂ ವೈದ್ಯರೊಂದಿಗೆ ಸಚಿವ ಮಧು ಬಂಗಾರಪ್ಪ ಸಮಾಲೋಚನೆ ನಡೆಸಿ, ವಿಭಾಗದ ಕಾರ್ಯನಿರ್ವಹಣೆ, ಚಿಕಿತ್ಸಾ ವ್ಯವಸ್ಥೆ ಮತ್ತು ಅಗತ್ಯ ಸೌಲಭ್ಯಗಳ ಕುರಿತು ಮಾಹಿತಿ ಪಡೆದರು. ರೋಗಿಗಳಿಗೆ ತುರ್ತು ಚಿಕಿತ್ಸೆ ಒದಗಿಸಲು ಅಗತ್ಯ ಕ್ರಮ ತೆಗೆದುಕೊಳ್ಳುವಂತೆ ಸೂಚನೆ ನೀಡಿದರು.
₹6 ಕೋಟಿ ಅನುದಾನಕ್ಕೆ ಮನವಿ
ಬೋಧಕ ಹಾಗೂ ಬೋಧಕೇತರ ಸಿಬ್ಬಂದಿ ಕೊರತೆಯ ಕುರಿತು ಮೆಡಿಕಲ್ ಡೀನ್ ಡಾ. ರಮೇಶ್ ಬಾಬು ಅವರು ಸಚಿವರ ಗಮನಕ್ಕೆ ತಂದರು. ನಾಲ್ಕು ಮಾಡ್ಯುಲರ್ ಓಟಿ ಕೊಠಡಿಗಳಿಗೆ ಅಗತ್ಯವಿರುವ ಬಾಕಿ ಯಂತ್ರೋಪಕರಣ ಅಳವಡಿಸಲು ಸುಮಾರು ₹6 ಕೋಟಿ ಅನುದಾನದ ಅಗತ್ಯವಿದೆ ಎಂದು ಮನವಿ ಮಾಡಿದರು. ಈ ಕುರಿತು ಲಿಖಿತ ಮನವಿ ಸಲ್ಲಿಸುವಂತೆ ಸಚಿವ ಮಧು ಬಂಗಾರಪ್ಪ ಸೂಚಿಸಿದರು. ಬಳಿಕ ವೈದ್ಯಕೀಯ ಶಿಕ್ಷಣ ಸಚಿವರೊಂದಿಗೆ ಚರ್ಚಿಸಿ, ಅಗತ್ಯ ಅನುದಾನವನ್ನು ಶೀಘ್ರವಾಗಿ ಒದಗಿಸಲು ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.
ಹೃದ್ರೋಗ ವಿಭಾಗಕ್ಕೆ ಚಿಕಿತ್ಸೆಗಾಗಿ ಹಾಗೂ ಹೊರರೋಗಿಗಳಾಗಿ ಚಿಕಿತ್ಸೆ ಪಡೆಯಲು ಆಗಮಿಸುವ ಸಾರ್ವಜನಿಕರಿಗೆ ತುರ್ತಾಗಿ ಚಿಕಿತ್ಸೆ ದೊರೆಯುವಂತೆ ವ್ಯವಸ್ಥೆ ಮಾಡಬೇಕು. ಸರತಿ ಸಾಲಿನಲ್ಲಿ ರೋಗಿಗಳು ಬಳಲುವಂತಾಗಬಾರದು. ಈ ಸಂಬಂಧ ಸಾರ್ವಜನಿಕರು ನೀಡಿರುವ ದೂರುಗಳ ಬಗ್ಗೆ ಕೂಡಲೇ ಗಮನ ನೀಡಬೇಕೆಂದು ಆಸ್ಪತ್ರೆಯ ಅಧಿಕಾರಿಗಳಿಗೆ ಸೂಚನೆ ನೀಡಿದರು. ಇದೇ ವೇಳೆ ರೋಗಿಗಳನ್ನು ಭೇಟಿಯಾಗಿ, ಚಿಕಿತ್ಸೆ ಕುರಿತು ಮಾಹಿತಿ ಮಾಡಿದರು.
ಮೆಡಿಕಲ್ ಡೀನ್ ಡಾ. ರಮೇಶ್ ಬಾಬು, ಹೃದ್ರೋಗ ವಿಭಾಗದ ಮುಖ್ಯಸ್ಥ ಹಾಗೂ ವಿಶೇಷ ಅಧಿಕಾರಿ ಡಾ. ಪರಮೇಶ್ವರ, ಹೃದಯ ರೋಗ ತಜ್ಞ ಡಾ. ಮಹೇಶ್ ಮೂರ್ತಿ ಸೇರಿದಂತೆ ವೈದ್ಯರು ಹಾಗೂ ಸಿಬ್ಬಂದಿ ಉಪಸ್ಥಿತರಿದ್ದರು.