ಶಿವಮೊಗ್ಗದಲ್ಲಿ ಮೂರು ಸುತ್ತು ಕುಶಾಲು ತೋಪು ಸಿಡಿಸಿ ಹುತಾತ್ಮರಿಗೆ ನಮನ, ತ್ಯಾಗ ಸ್ಮರಣೆ

ಶಿವಮೊಗ್ಗ: ಅರಣ್ಯ, ವನ್ಯಜೀವಿ ಮತ್ತು ನೈಸರ್ಗಿಕ ಸಂಪತ್ತನ್ನು ಸಂರಕ್ಷಿಸುವ ಸಂದರ್ಭ ಕರ್ತವ್ಯ ನಿರ್ವಹಿಸುತ್ತಾ ಹುತಾತ್ಮರಾದ ಅರಣ್ಯ ಇಲಾಖೆಯ ಅಧಿಕಾರಿ, ಸಿಬ್ಬಂದಿ ಹಾಗೂ ಅರಣ್ಯ ರಕ್ಷಕರ ತ್ಯಾಗವನ್ನು ಮರೆಯಲಾಗದು ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಹಾಗೂ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಅಧ್ಯಕ್ಷ ನ್ಯಾ.ಮಂಜುನಾಥ ಜಿ.ಎ. ಹೇಳಿದರು.  

ನಗರದ ಶ್ರೀಗಂಧದ ಕೋಠಿಯಲ್ಲಿರುವ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗಳ ಕಚೇರಿ ಆವರಣದಲ್ಲಿ ಆಯೋಜಿಸಲಾಗಿದ್ದ ರಾಷ್ಟ್ರೀಯ ಅರಣ್ಯ ಹುತಾತ್ಮರ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

forest-martyrs-day-observed-in-shivamogga

ಅರಣ್ಯದಲ್ಲಿನ ಕೆಲಸವು ಕಚೇರಿಯ ಕೆಲಸಕ್ಕಿಂತ ಭಿನ್ನ. ಅಲ್ಲಿ ಎದುರಾಗುವ ಸವಾಲುಗಳನ್ನು ಎದುರಿಸಲು ಚಾಣಾಕ್ಷತೆ, ಕಠಿಣ ನಿರ್ಧಾರ ಹಾಗೂ ಗಟ್ಟಿ ಗುಂಡಿಗೆ ಬೇಕು. ಅರಣ್ಯದ ನಾಶವೆಂದರೆ ಅದು ಮನುಕುಲದ ವಿನಾಶ. ಅರಣ್ಯ ರಕ್ಷಣೆಯಲ್ಲಿ ಕಾರ್ಯನಿರತ 65 ಸಿಬ್ಬಂದಿ ಹುತಾತ್ಮರಾಗಿರುವುದು ನೋವಿನ ಸಂಗತಿ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಡಾ.ಕೆ.ಟಿ.ಹನುಮಂತಪ್ಪ, ಅರಣ್ಯ ಹುತಾತ್ಮರ ತ್ಯಾಗವು ಪರಿಸರ ಸಂರಕ್ಷಣೆ ಮತ್ತು ಭವಿಷ್ಯದ ಪೀಳಿಗೆಯ ಹಿತಕ್ಕಾಗಿ ಮಾಡಿದ ಸೇವೆಯ ಪ್ರತೀಕವಾಗಿದೆ. ಅರಣ್ಯ ನಾಶ, ಅಕ್ರಮ ಬೇಟೆ ಹಾಗೂ ಮರಗಳ ಹನನದ ವಿರುದ್ಧ ಸಮಾಜ ಜಾಗೃತಗೊಳ್ಳಬೇಕು ಎಂದರು.

ವನ್ಯಜೀವಿ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಪ್ರಸನ್ನಕೃಷ್ಣ ಪಟಗಾರ್ ಪ್ರಾಸ್ತಾವಿಕವಾಗಿ ಮಾತನಾಡಿ, ಹುತಾತ್ಮರ ಹೆಸರು ವಾಚಿಸಿದರು. ನಂತರ ಮೂರು ಕುಶಾಲು ತೋಪು ಹಾರಿಸಿ, ಪುಷ್ಪಗುಚ್ಛ ಅರ್ಪಿಸಿ ಹುತಾತ್ಮರಿಗೆ ಗೌರವ ನಮನ ಸಲ್ಲಿಸಲಾಯಿತು.

ಕಾರ್ಯ ಯೋಜನೆ ಮತ್ತು ಭೂ-ಮಾಪನ ವಿಭಾಗದ ಅರಣ್ಯ ಸಂರಕ್ಷಣಾಧಿಕಾರಿ ಗಣಪತಿ.ಕೆ., ಜಿಲ್ಲಾಧಿಕಾರಿ ಪ್ರಭುಲಿಂಗ ಕವಳಿಕಟ್ಟಿ, ಜಿಲ್ಲಾ ರಕ್ಷಣಾಧಿಕಾರಿ ಬಿ.ನಿಖಿಲ್‌, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಎನ್.ಹೇಮಂತ್‌ ಸೇರಿ ಅರಣ್ಯ ಇಲಾಖೆಯ ವಿವಿಧ ಅಧಿಕಾರಿಗಳು, ಸಿಬ್ಬಂದಿ ಹಾಗೂ ಹುತಾತ್ಮರ ಕುಟುಂಬದ ಸದಸ್ಯರು ಉಪಸ್ಥಿತರಿದ್ದರು.

ನಿಮ್ಮೂರ ಸುದ್ದಿ ಕೆಲವೇ ನಿಮಿಷದಲ್ಲಿ ಸಾವಿರ ಸಾವಿರ ಜನರನ್ನು ತಲುಪುತ್ತೆ!

ಶಿವಮೊಗ್ಗ ಜಿಲ್ಲೆಯ ಯಾವುದೇ ಊರಿನ ಸುದ್ದಿಯನ್ನು ನಮಗೆ ಕಳುಹಿಸಬಹುದು. ನಮ್ಮ ವಾಟ್ಸಪ್‌ ನಂಬರ್ 7411700200.

ನಮ್ಮ ಗ್ರೂಪ್‌ ಸೇರಿಲು ಇಲ್ಲಿ ಕ್ಲಿಕ್‌ ಮಾಡಿ