ಶಿವಮೊಗ್ಗ: ಹಿಂದೂ ಮಹಾಸಭಾ ಗಣಪತಿ ಮೂರ್ತಿ ಸಿದ್ದವಾಗಿದ್ದು ನಾಳೆ ಬೆಳಿಗ್ಗೆ ನಗರದ ಕೋಟೆ ಶ್ರೀ ಭೀಮೇಶ್ವರ ದೇವಸ್ಥಾನದ ಆವರಣದಲ್ಲಿ ಪ್ರತಿಷ್ಠಾಪನೆ ಆಗಲಿದೆ. 82ನೇ ವರ್ಷದ ಆಚರಣೆಗೆ ಅಂತಿಮ ಹಂತದ ಸಿದ್ಧತೆ ನಡೆಯುತ್ತಿದೆ.
ಗಣೇಶ ಮೂರ್ತಿ ರೆಡಿ
ನಗರದ ಕುಂಬಾರ ಬೀದಿಯ ಕಲಾವಿದ ಗಣೇಶ ಅವರು ಹಿಂದೂ ಮಹಾಸಭಾ ಗಣಪತಿಯ ಮೂರ್ತಿಯನ್ನು ಸಿದ್ಧಪಡಿಸಿದ್ದಾರೆ. ಕಳೆದ ವರ್ಷಕ್ಕಿಂತಲು ನಾಲ್ಕು ದಿನ ಮೊದಲೇ ಹಿಂದೂ ಮಹಾಸಭಾ ಗಣಪತಿ ಮೂರ್ತಿ ರೆಡಿಯಾಗಿದೆ. ಈ ಮೂರ್ತಿಯನ್ನು ವೀಕ್ಷಿಸಲು, ವಿಡಿಯೋ, ಫೋಟೊ ಕ್ಲಿಕ್ಕಿಸಿಕೊಳ್ಳಲು ಹಲವರು ಗಣೇಶ ಅವರ ಮನೆ ಬಳಿ ಬರುತ್ತಿದ್ದಾರೆ.

ಕಳೆದ 82 ವರ್ಷದಿಂದ ಹಿಂದೂ ಮಹಾಸಭಾ ಗಣಪತಿ ಮೂರ್ತಿ ಇಲ್ಲಿಯೇ ಸಿದ್ದವಾಗುತ್ತಿದೆ. ನಮ್ಮ ಅಜ್ಜ ಜಿ.ಎನ್.ನಂಜುಂಡಪ್ಪ ಅವರು ಸುಮಾರು 25 ವರ್ಷ ಮೂರ್ತಿ ಸಿದ್ದಪಡಿಸಿಕೊಟ್ಟಿದ್ದರು. ನಾನು ಕಳೆದ 52 ವರ್ಷದಿಂದ ಹಿಂದೂ ಮಹಾಸಭಾ ಗಣಪತಿ ಮೂರ್ತಿ ಸಿದ್ಧಪಡಿಸುತ್ತಿದ್ದೇನೆ.
– ಗಣೇಶ್, ಮೂರ್ತಿ ತಯಾರಕರು
ಗಣೇಶೋತ್ಸವಕ್ಕೆ ಸಿದ್ಧತೆ ಪೂರ್ಣ
ಹಿಂದೂ ಸಂಘಟನೆ ಮಹಾ ಮಂಡಲಿ ವತಿಯಿಂದ ಹಿಂದೂ ಮಹಾಸಭಾ ಗಣಪತಿ ಪ್ರತಿಷ್ಠಾಪನೆಗೆ ಅಂತಿಮ ಹಂತದ ಸಿದ್ಧತೆ ನಡೆಯುತ್ತಿದೆ. ನಗರದ ಕೋಟೆ ಶ್ರೀ ಭೀಮೇಶ್ವರ ದೇವಸ್ಥಾನದಲ್ಲಿ ಗಣಪತಿ ಮೂರ್ತಿ ಪ್ರತಿಷ್ಠಾಪಿಸಲಾಗುತ್ತದೆ. ದೇವಸ್ಥಾನದ ರಸ್ತೆಗೆ ಮಹಾದ್ವಾರ ನಿರ್ಮಿಸಲಾಗಿದೆ. ಭೀಮೇಶ್ವರ ದೇವಸ್ಥಾನದಲ್ಲಿ ಪೆಂಡಾಲ್ ಹಾಕಿ ಸಿದ್ಧತೆ ಮಾಡಲಾಗಿದೆ.
ಹಿಂದೂ ಮಹಾಸಭಾ ಗಣೇಶೋತ್ಸವದ ಅಂಗವಾಗಿ ಸೆ.14ರಿಂದ 25ರವರೆಗೆ ವಿವಿಧ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ.
ಮಹಾದ್ವಾರದ ಕುರಿತು ಇನ್ನೂ ಕುತೂಹಲ
ಇನ್ನು, ಗಾಂಧಿ ಬಜಾರ್ ರಸ್ತೆಯ ಮುಂಭಾಗ ಮಹಾದ್ವಾರದ ಬಗ್ಗೆ ಇನ್ನೂ ಕುತೂಹಲವಿದೆ. ಕಲಾವಿದ ಜೀವನ್ ಅವರು ಜೀವನ್ ಕಲಾ ಕೇಂದ್ರದಲ್ಲಿ ಮಹಾದ್ವಾರ ನಿರ್ಮಾಣ ಕಾರ್ಯ ನಡೆಯುತ್ತಿದೆ. ಈಗಾಗಲೇ ಹಲವು ರೀಲ್ಸ್‌ಗಳು ಹರಿದಾಡುತ್ತಿದ್ದು, ಜನರಲ್ಲಿ ಕುತೂಹಲ ಹೆಚ್ಚಿಸಿದೆ. ಹಿಂದಿನ ಬಾರಿಗಿಂತಲು ಅದ್ಧೂರಿಯಾದ ಮಹಾದ್ವಾರ ಸ್ಥಾಪಿಸಲಾಗುತ್ತಿದೆ ಎಂದು ಕಲಾವಿದ ಜೀವನ್ ಹೇಳಿಕೊಂಡಿದ್ದಾರೆ.
