ಕಸ್ತೂರಿ ರಂಗನ್‌ ವರದಿ, ಸರ್ಕಾರದಿಂದ ಮಹತ್ವದ ನಿರ್ಣಯ ಪ್ರಕಟ, ಇಲ್ಲಿದೆ ಡಿಟೇಲ್ಸ್‌

ಬೆಂಗಳೂರು: ಕಸ್ತೂರಿ ರಂಗನ್ ವರದಿಯ 7ನೇ ಕರಡು ಅಧಿಸೂಚನೆ ಯಥಾವತ್ತಾಗಿ ಒಪ್ಪದಿರಲು ಕರ್ನಾಟಕ ವಿಧಾನಸಭೆಯ ವಿಶೇಷ ಅಧಿವೇಶನದಲ್ಲಿ ಸರ್ವಾನುಮತದ ನಿರ್ಣಯ ಕೈಗೊಳ್ಳಲಾಗಿದೆ. ವರದಿಯ ನ್ಯೂನತೆಗಳನ್ನು ಪರಿಶೀಲಿಸಲು ನಿವೃತ್ತ ನ್ಯಾಯಾಧೀಶರ ಅಧ್ಯಕ್ಷತೆಯಲ್ಲಿ ಉನ್ನತ ಮಟ್ಟದ ತಜ್ಞ ಸಮಿತಿ ರಚಿಸಲು ನಿರ್ಧರಿಸಲಾಗಿದೆ.

ಪಶ್ಚಿಮಘಟ್ಟ ವ್ಯಾಪ್ತಿಯ 10 ಜಿಲ್ಲೆಗಳ 1,449 ಗ್ರಾಮಗಳನ್ನು ಪರಿಸರ ಸೂಕ್ಷ್ಮ ಪ್ರದೇಶ (ಇಎಸ್‌ಎ) ಎಂದು ಗುರುತಿಸಿರುವ ಕೇಂದ್ರ ಸರ್ಕಾರದ ಅಧಿಸೂಚನೆಯು ಭೌತಿಕ ಸಮೀಕ್ಷೆ ನಡೆಸದೆ ಕೇವಲ ಉಪಗ್ರಹ ದತ್ತಾಂಶವನ್ನು ಆಧರಿಸಿದೆ. ರಾಜ್ಯ ಸರ್ಕಾರ ಸರ್ವೇ ನಂಬರ್ ಆಧಾರಿತ ಭೌತಿಕ ಪರಿಶೀಲನೆ ಪೂರ್ಣಗೊಳಿಸಿ ವರದಿ ಸಲ್ಲಿಸುವವರೆಗೆ, ಕೇಂದ್ರ ಸರ್ಕಾರವು ಅಂತಿಮ ಅಧಿಸೂಚನೆ ಹೊರಡಿಸಬಾರದು. ಈ ಪ್ರಕ್ರಿಯೆಗೆ ಒಂದು ವರ್ಷದ ಕಾಲಾವಕಾಶ ನೀಡಬೇಕು ಎಂದು ನಿರ್ಣಯದಲ್ಲಿ ಆಗ್ರಹಿಸಲಾಗಿದೆ.

VIDHANA-SOUDHA-GENERAL-IMAGE.jpg

ಇಲ್ಲಿದೆ ನಿರ್ಣಯದ 5 ಪ್ರಮುಖ ಅಂಶ

POINT-1

ವರದಿಯ ನ್ಯೂನತೆ ಹಾಗೂ ನೈಜ ಸ್ಥಿತಿ ಪರಿಶೀಲಿಸಲು ನಿವೃತ್ತ ನ್ಯಾಯಾಧೀಶರ ಅಧ್ಯಕ್ಷತೆಯಲ್ಲಿ ಉನ್ನತ ಮಟ್ಟದ ಸಮಿತಿ ರಚಿಸಲಾಗುವುದು. ಈ ಸಮಿತಿಯಲ್ಲಿ ಕಂದಾಯ ಮತ್ತು ಅರಣ್ಯ ಅಧಿಕಾರಿಗಳು, ರೈತ ಪ್ರತಿನಿಧಿಗಳು, ಉದ್ಯಮ ಕ್ಷೇತ್ರದ ಪ್ರತಿನಿಧಿಗಳು ಹಾಗೂ ಶೈಕ್ಷಣಿಕ ಸಂಸ್ಥೆಗಳ ಪರಿಸರ ತಜ್ಞರು ಇರಲಿದ್ದಾರೆ. ಇದರೊಂದಿಗೆ ಸಮಿತಿಗೆ ಸಹಾಯ ಮಾಡಲು ಗ್ರಾಮ ಪಂಚಾಯಿತಿ ಮಟ್ಟದಲ್ಲೂ ಜನಪ್ರತಿನಿಧಿಗಳನ್ನ ಒಳಗೊಂಡ ಸಮಿತಿ ರಚಿಸಲು ತೀರ್ಮಾನಿಸಲಾಗಿದೆ.

POINT-2

ಪರಿಸರ ಸೂಕ್ಷ್ಮ ಪ್ರದೇಶದ ವ್ಯಾಪ್ತಿಗೆ ಕೇವಲ ಅಧಿಸೂಚಿತ ಹಾಗೂ ನೈಜ ಅರಣ್ಯ ಭೂಮಿಯನ್ನು ಮಾತ್ರ ಸೇರಿಸಬೇಕು. ರೈತರ ಕೃಷಿ ಜಮೀನು, ತೋಟಗಾರಿಕೆ ಭೂಮಿ, ಜನವಸತಿ ಪ್ರದೇಶಗಳು ಮತ್ತು ಸಾರ್ವಜನಿಕ ಸೌಲಭ್ಯಗಳನ್ನು ಇಎಸ್ಎ ವ್ಯಾಪ್ತಿಯಿಂದ ಸಂಪೂರ್ಣವಾಗಿ ಹೊರಗಿಡಬೇಕು.

POINT-3

ಕೇಂದ್ರ ಸರ್ಕಾರದ ಕರಡು ಅಧಿಸೂಚನೆಯು ಉಪಗ್ರಹ ಚಿತ್ರಣವನ್ನು ಮಾತ್ರ ಆಧರಿಸಿದೆ. ನಿಖರ ಗಡಿ ಅಥವಾ ಸರ್ವೇ ನಂಬರ್ ಸ್ಪಷ್ಟತೆಯಿಲ್ಲ. ಗ್ರಾಮದ ಐದನೇ ಒಂದು ಭಾಗದಷ್ಟು ಅರಣ್ಯವಿದ್ದರೆ ಇಡೀ ಗ್ರಾಮವನ್ನೇ ಪರಿಸರ ಸೂಕ್ಷ್ಮ ಎಂದು ಘೋಷಿಸಿರುವುದು ಸರಿಯಲ್ಲ. ತಜ್ಞ ಸಮಿತಿಯಿಂದ ಸರ್ವೇ ನಂಬರ್ ಆಧಾರಿತ ಭೌತಿಕ ಅಳತೆ ನಡೆಸಲು ನಿರ್ಧರಿಸಿದೆ.

POINT-4

ಬಗರ್ ಹುಕುಂ, ಅರಣ್ಯ ಹಕ್ಕು ಕಾಯಿದೆ, ಡೀಮ್ಡ್ ಫಾರೆಸ್ಟ್, ಭೂ ಮಂಜೂರಾತಿ ಮತ್ತು ನ್ಯಾಯಾಲಯಗಳಲ್ಲಿ ಬಾಕಿ ಇರುವ ಪ್ರಕರಣಗಳನ್ನು ಪರಿಗಣಿಸದೇ ಅಧಿಸೂಚನೆ ಹೊರಡಿಸಿರುವುದು ಸ್ಥಳೀಯರಲ್ಲಿ ಆತಂಕ ಮೂಡಿಸಿದೆ. ಪರಿಸರ ಸಂರಕ್ಷಣೆಯ ಜೊತೆಗೆ ರೈತರು ಹಾಗೂ ಕಾರ್ಮಿಕರ ಪರ್ಯಾಯ ಜೀವನೋಪಾಯ ಮತ್ತು ಆರ್ಥಿಕ ನೆರವಿಗಾಗಿ ಸೂಕ್ತ ಮಾರ್ಗಸೂಚಿ ರೂಪಿಸಬೇಕೆಂದು ಆಗ್ರಹಿಸಲಾಗಿದೆ.

POINT-5

ರಾಜ್ಯದ 20,668 ಚದರ ಕಿಲೋಮೀಟರ್ ವ್ಯಾಪ್ತಿಯಲ್ಲಿ ನೈಜ ಭೌತಿಕ ಸಮೀಕ್ಷೆ ನಡೆಸಿ ವರದಿ ತಯಾರಿಸಲು ರಾಜ್ಯ ಸರ್ಕಾರಕ್ಕೆ ಕನಿಷ್ಠ 1 ವರ್ಷದ ಕಾಲಾವಕಾಶ ಬೇಕು. ರಾಜ್ಯ ಸರ್ಕಾರವು ತನ್ನ ವರದಿ ಸಲ್ಲಿಸಿ, ಕೇಂದ್ರದೊಂದಿಗೆ ವಿವರವಾದ ಚರ್ಚೆ ನಡೆಸುವವರೆಗೆ ಕರ್ನಾಟಕಕ್ಕೆ ಸಂಬಂಧಿಸಿದಂತೆ ಅಂತಿಮ ನಿರ್ಧಾರ ಕೈಗೊಳ್ಳಬಾರದು.