ಹಿಂದೂ ಮಹಾಸಭಾ ಗಣಪತಿ ಅದ್ಧೂರಿ ಮೆರವಣಿಗೆ ಆರಂಭ, ಹೇಗಿದೆ ಉತ್ಸವ?

ಶಿವಮೊಗ್ಗ: ಹಿಂದೂ ಸಂಘಟನೆಗಳ ಮಹಾ ಮಂಡಲದ ಗಣಪತಿ ಮೆರವಣಿಗೆ ಆರಂಭವಾಗಿದೆ. ಅದ್ಧೂರಿ ರಾಜಬೀದಿ ಉತ್ಸವದಲ್ಲಿ ದೊಡ್ಡ ಸಂಖ್ಯೆಯ ಜನರು ಭಾಗವಹಿಸಿದ್ದಾರೆ.

ಅನಂತ ಚತುರ್ದಶಿ ಹಿನ್ನೆಲೆ ಇಂದು ಹಿಂದೂ ಮಹಾಸಭಾ ಗಣಪತಿ ಮೆರವಣಿಗೆ ನಡೆಸಲಾಗುತ್ತಿದೆ. ಇವತ್ತು ಬೆಳಿಗ್ಗೆ ಕೋಟೆ ಶ್ರೀ ಪಾರ್ವತಿ ಭೀಮೇಶ್ವರ ದೇವಸ್ಥಾನದ ಆವರಣದಲ್ಲಿ ಗಣಪತಿ ಮೂರ್ತಿಗೆ ಪೂಜೆ ಸಲ್ಲಿಸಲಾಯಿತು. ನಂತರ ದೇಗುಲದ ಮುಂಭಾಗದವರೆಗೆ ದೇವರ ಮೂರ್ತಿಯನ್ನು ಹೊತ್ತು ಬಂದು ಟ್ರಾಕ್ಟರ್‌ ಮೇಲೆ ಇರಿಸಲಾಯಿತು.

Hindu-Mahasabha-Ganesh-Procession-in-Shivamogga-2026

ಪಟಾಕಿ ಅಬ್ಬರ, ಬೃಹತ್‌ ಹಾರ

ಮೆರವಣಿಗೆ ಆರಂಭದಲ್ಲಿ ಪಟಾಕಿ ಅಬ್ಬರ ಜೋರಾಗಿತ್ತು. ಕೋಟೆ ರಂಗಮಂದಿರದ ಆವರಣ ಮತ್ತು ಸರ್ಕಲ್‌ನಲ್ಲಿ ಪಟಾಕಿಗಳನ್ನು ಸಿಡಿಸಲಾಯಿತು. ಇನ್ನು, ಗಣಪತಿ ಮೂರ್ತಿ ಕೋಟೆ ರಸ್ತೆಗೆ ಆಗಮಿಸುತ್ತಿದ್ದಂತೆ ಹಣ್ಣು ಮತ್ತು ಹೂವಿನ ಹಾರಗಳನ್ನು ಅರ್ಪಿಸಲಾಯಿತು. ಕೋಟೆ ಶ್ರೀ ಮಾರಿಕಾಂಬ ದೇವಸ್ಥಾನದ ಬಳಿ ಕಾಂಗ್ರೆಸ್‌ ಮುಖಂಡ ಎಂ.ಶ್ರೀಕಾಂತ್‌ ಅವರು ಗಣಪತಿ ಮೂರ್ತಿಗೆ ದೊಡ್ಡ ಹಾರ ಅರ್ಪಿಸಿದರು.

ರಂಗೇರಿಸಿದ ಕಲಾ ತಂಡಗಳು

ಇನ್ನು, ಮೆರವಣಿಗೆಯಲ್ಲಿ ಕಲಾ ತಂಡಗಳು ಭಾಗವಹಿಸಿವೆ. ತಮಟೆ, ಚಂಡೆ, ನಾಸಿಕ್‌ ಡೋಲು ಸೇರಿದಂತೆ ವಿವಿಧ ಕಲಾ ತಂಡಗಳು ಭಾಗವಹಿಸಿದ್ದವು. ಇವುಗಳ ಸದ್ದಿಗೆ ಮಕ್ಕಳು, ಮಹಿಳೆಯರು, ವೃದ್ಧರು ಹೆಜ್ಜೆ ಹಾಕಿ ಸಂಭ್ರಮಿಸಿದರು.

ರಸ್ತೆಯ ಇಕ್ಕೆಲದಲ್ಲು ಜನ

ಗಣಪತಿ ಮೆರವಣಿಗೆ ಕಣ್ತುಂಬಿಕೊಳ್ಳಲು ದೊಡ್ಡ ಸಂಖ್ಯೆಯ ಜನರು ಸೇರಿದ್ದರು. ರಸ್ತೆಯ ಇಕ್ಕೆಲದಲ್ಲಿ ಗಣಪತಿಗಾಗಿ ಕಾದು ಕೂತಿದ್ದರು. ಮೆರವಣಿಗೆ ಆಗಮಿಸುತ್ತಿದ್ದಂತೆ ದೇವರಿಗೆ ಪೂಜೆ ಸಲ್ಲಿಸಿದರು. ಕುಟುಂಬ ಸಹಿತ ಜನರು ಆಗಮಿಸಿ ಮೆರವಣಿಗೆ ವೀಕ್ಷಿಸುತ್ತಿದ್ದಾರೆ.