ಶಿವಮೊಗ್ಗ: ಸಚಿವ ಮಧು ಬಂಗಾರಪ್ಪ ಅವರ ಆಪ್ತರೊಬ್ಬರು ಶಿವಮೊಗ್ಗ – ಭದ್ರಾವತಿ ನಗರಾಭಿವೃದ್ಧಿ ಪ್ರಾಧಿಕಾರ ಆಯುಕ್ತರ ಕಚೇರಿಗೆ ತೆರಳಿ ₹25 ಲಕ್ಷ ಲಂಚ ಕೇಳಿದ್ದಾರೆ ಎಂದು ಪ್ರಾಧಿಕಾರದ ಅಧ್ಯಕ್ಷ ಹೆಚ್.ಎಸ್. ಸುಂದರೇಶ್ ಆರೋಪಿಸಿರುವ ಹಿನ್ನೆಲೆ, ಸಚಿವರ ಪಾತ್ರದ ಬಗ್ಗೆಯೂ ತನಿಖೆ ನಡೆಯಬೇಕು. ಈ ಕಾರಣಕ್ಕೆ ಮಧು ಬಂಗಾರಪ್ಪ ಅವರು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಮಾಜಿ ಶಾಸಕ ಕೆ.ಬಿ. ಪ್ರಸನ್ನಕುಮಾರ್ ಒತ್ತಾಯಿಸಿದರು.
ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಸಚಿವರ ಆಪ್ತರೊಬ್ಬರು ಅಧಿಕಾರಿಗೆ ಲಂಚ ಕೇಳಿದ್ದಾರೆ ಎಂಬ ಆರೋಪ ಗಂಭೀರ ವಿಚಾರ . ಇದರ ಹಿಂದೆ ಸಚಿವರ ಪಾತ್ರವಿದೆಯೇ ಎಂಬುದನ್ನು ತನಿಖೆಯಿಂದ ಸ್ಪಷ್ಟಪಡಿಸಬೇಕು. ಲೋಕಾಯುಕ್ತರು ಸ್ವಯಂಪ್ರೇರಿತವಾಗಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಬೇಕು’ ಎಂದರು.

‘2022ರ ನವೆಂಬರ್ 28ರಂದು ಜಿಲ್ಲೆಯ ಜ್ವಲಂತ ಸಮಸ್ಯೆಗಳಿಗೆ ಪರಿಹಾರ ಕಲ್ಪಿಸುವ ಭರವಸೆ ನೀಡಿ ಮಧು ಬಂಗಾರಪ್ಪ ಅವರು ಜನಾಕ್ರೋಶ ಪಾದಯಾತ್ರೆ ನಡೆಸಿದ್ದರು. ಶರಾವತಿ ಸಂತ್ರಸ್ತರ ಸಮಸ್ಯೆ, ಬಗರ್ಹುಕುಂ ಸಾಗುವಳಿ ಸೇರಿದಂತೆ ಹಲವು ವಿಚಾರಗಳನ್ನು ಬಗೆಹರಿಸುವುದಾಗಿ ಭರವಸೆ ನೀಡಿದ್ದರು. ಜನರು ಅವರನ್ನು ಗೆಲ್ಲಿಸಿ ಕಳುಹಿಸಿದರು. ಬಳಿಕ ಅವರು ಸಚಿವರಾದರು. ಆ ಬಳಿಕ ಜಿಲ್ಲೆಗೆ ಆಡಳಿತ ಭವನ ನಿರ್ಮಿಸುವುದಾಗಿ ಹೇಳಿದ್ದರು. ಮೂರು ಬಜೆಟ್ಗಳು ಕಳೆದರೂ ಇದಕ್ಕೆ ಅನುದಾನ ಬಿಡುಗಡೆಯಾಗಿಲ್ಲ. ಜಿಲ್ಲೆಯ ಯಾವುದೇ ತಾಲ್ಲೂಕನ್ನು ಬರಪೀಡಿತ ಎಂದು ಘೋಷಣೆ ಮಾಡಿಸುವಲ್ಲಿಯೂ ವಿಫಲರಾಗಿದ್ದಾರೆ’ ಎಂದು ಆರೋಪಿಸಿದರು.
‘ಅತಿವೃಷ್ಟಿಯಿಂದ ಜಿಲ್ಲೆಯ ಹಲವು ತಾಲ್ಲೂಕುಗಳಲ್ಲಿ ಲಕ್ಷಾಂತರ ರೂಪಾಯಿ ಮೌಲ್ಯದ ಅಡಿಕೆ ಹಾಗೂ ತೆಂಗಿನ ಮರಗಳು ನೆಲಕ್ಕುರುಳಿವೆ. ಹಾನಿಗೊಳಗಾದ ರೈತರಿಗೆ ಸೂಕ್ತ ಪರಿಹಾರ ದೊರಕಿಸುವ ನಿಟ್ಟಿನಲ್ಲಿಯೂ ಅಗತ್ಯ ಕ್ರಮ ಕೈಗೊಂಡಿಲ್ಲ’ ಎಂದು ಪ್ರಸನ್ನಕುಮಾರ್ ಆರೋಪಿಸಿದರು. ಸುದ್ದಿಗೋಷ್ಠಿಯಲ್ಲಿ ಪ್ರಮುಖರಾದ ನರಸಿಂಹ ಗಂಧದ ಮನೆ, ದೀಪಕ್ ಸಿಂಗ್, ಮಂಜುನಾಥ, ನಾಗೇಶ್, ಸಂಗಯ್ಯ, ಸುನೀಲ್, ರಘು, ವೆಂಕಟೇಶ್ ಇದ್ದರು.