ಶಿವಮೊಗ್ಗ: ಪ್ರೀತಿಸುವುದಾಗಿ ನಂಬಿಸಿ ಮಹಿಳೆ ಮೇಲೆ ಲೈಂಗಿಕ ದೌರ್ಜನ್ಯ ಎಸಗಿ, ನಂತರ ಮದುವೆಯಾಗಿ ಮನೆಗೆ ಸೇರಿಸಿಕೊಳ್ಳದೆ ಕಿರುಕುಳ ನೀಡಿದ್ದ ಪ್ರಕರಣದ ಸಂಬಂಧ 6 ಮಂದಿ ಶಿವಮೊಗ್ಗ ನ್ಯಾಯಾಲಯ ಜೈಲು ಶಿಕ್ಷೆ ಮತ್ತು ದಂಡ ವಿಧಿಸಿದೆ.
ಶಿವಮೊಗ್ಗ ತಾಲೂಕಿನ ಗ್ರಾಮ ಒಂದರ 32 ವರ್ಷದ ಮಹಿಳೆಗೆ ಸತೀಶ್ ಎಂಬಾತ ಪ್ರೀತಿಸುವುದಾಗಿ ನಂಬಿಸಿ ಲೈಂಗಿಕ ದೌರ್ಜನ್ಯ ಎಸಗಿದ್ದ. ಆ ನಂತರ ಆಕೆಯನ್ನು ಸತೀಶ ಮದುವೆಯಾಗಿದ್ದ. ಆದರೆ ಆತ ಮತ್ತು ಆತನ ಸಂಬಂಧಿಕರಾದ ಮಂಜುನಾಥ್, ಹುಚ್ಚರಾಯ, ಮೇಘಾ ಮತ್ತು ಕುಮುದಾ ಮಹಿಳೆಯನ್ನು ಮನೆಗೆ ಸೇರಿಸಿಕೊಳ್ಳದೆ ಹಲ್ಲೆ ನಡೆಸಿ ಜೀವ ಬೆದರಿಕೆ ಹಾಕಿದ್ದರು ಎಂದು ಆರೋಪಿಸಲಾಗಿತ್ತು.

ಈ ಸಂಬಂಧ ಕುಂಸಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ತನಿಖೆ ನಡೆಸಿದ ಪೊಲೀಸ್ ಇನ್ಸ್‌ಪೆಕ್ಟರ್ ಹರೀಶ್ ಕೆ. ಪಾಟೀಲ್ ಅವರು ನ್ಯಾಯಾಲಯಕ್ಕೆ ದೋಷಾರೋಪಣ ಪತ್ರ ಸಲ್ಲಿಸಿದ್ದರು. ವಿಚಾರಣೆ ನಡೆಸಿದ ಶಿವಮೊಗ್ಗದ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ (ಎಫ್‌ಟಿಎಸ್‌ಸಿ-1) ನ್ಯಾಯಾಧೀಶರಾದ ನಿಂಗನಗೌಡ ಭ. ಪಾಟೀಲ್ ಅವರು ಸೆಪ್ಟೆಂಬರ್ 28ರಂದು ಈ ತೀರ್ಪು ಪ್ರಕಟಿಸಿದ್ದಾರೆ. ಆರೋಪ ಸಾಬೀತಾದ ಹಿನ್ನೆಲೆ ಆರು ಅಪರಾಧಿಗಳಿಗೆ 1 ವರ್ಷ ಜೈಲು ಶಿಕ್ಷೆ ಹಾಗೂ ₹1.14 ಲಕ್ಷ ದಂಡ ವಿಧಿಸಿ ಆದೇಶಿಸಿದೆ. ದಂಡದ ಮೊತ್ತದಲ್ಲಿ ಸಂತ್ರಸ್ತೆಗೆ ₹1 ಲಕ್ಷ ಪರಿಹಾರ ನೀಡುವಂತೆ ನ್ಯಾಯಾಲಯ ಆದೇಶಿಸಿದೆ. ಸರ್ಕಾರದ ಪರವಾಗಿ ಸರ್ಕಾರಿ ಅಭಿಯೋಜಕರಾದ ಶ್ರೀಧರ್ ಅವರು ವಾದ ಮಂಡಿಸಿದ್ದರು.