ಶಿವಮೊಗ್ಗ: ಸಕ್ರೆಬೈಲು ಆನೆ ಬಿಡಾರವು ಅಗತ್ಯ ಸುರಕ್ಷತಾ ಮಾರ್ಗಸೂಚಿಗಳನ್ನು ಅಳವಡಿಸಿಕೊಂಡ ನಂತರ ಸೆಪ್ಟೆಂಬರ್ 26 ರಿಂದ ಸಾರ್ವಜನಿಕರ ವೀಕ್ಷಣೆಗೆ ಪುನರಾರಂಭಗೊಂಡಿದೆ.
ಕೊಡಗಿನ ದುಬಾರೆ ಆನೆ ಶಿಬಿರದಲ್ಲಿ ಮೇ 18 ರಂದು ನಡೆದ ಆಕಸ್ಮಿಕ ದುರ್ಘಟನೆಯಲ್ಲಿ ಮಹಿಳೆಯೊಬ್ಬರು ಮೃತಪಟ್ಟಿದ್ದರು. ಈ ಹಿನ್ನೆಲೆ ಪ್ರವಾಸಿಗರ ಸುರಕ್ಷತೆಯ ದೃಷ್ಟಿಯಿಂದ ರಾಜ್ಯದ ಎಲ್ಲಾ ಆನೆ ಶಿಬಿರಗಳನ್ನು ತಾತ್ಕಾಲಿಕವಾಗಿ ಬಂದ್ ಮಾಡಲು ಅರಣ್ಯ ಸಚಿವರು ಆದೇಶಿಸಿದ್ದರು. ಅರಣ್ಯ ಇಲಾಖೆಯ ಹೊಸ ಮಾರ್ಗಸೂಚಿಯಂತೆ ಸಕ್ರೆಬೈಲು ಬಿಡಾರದಲ್ಲಿ ಸಾರ್ವಜನಿಕರಿಗೆ ಮತ್ತು ಆನೆಗಳಿಗೆ ಪ್ರತ್ಯೇಕ ಮಾರ್ಗಗಳನ್ನು ನಿರ್ಮಿಸಲಾಗಿದೆ. ಪ್ರವಾಸಿಗರು ಮತ್ತು ಆನೆಗಳ ನಡುವೆ ನೇರ ಸಂಪರ್ಕ ಬಾರದಂತೆ ತಡೆಯಲು ಜಾಗೃತಿ ಹಾಗೂ ಸೂಚನಾ ಫಲಕಗಳನ್ನು ಅಳವಡಿಸಲಾಗಿದೆ.

ಇನ್ನು, ಕರ್ನಾಟಕ ಸಾಕಾನೆ ಶಿಬಿರ ಸುರಕ್ಷತಾ ನಿಯಮಾವಳಿಯಂತೆ ಇನ್ಮುಂದೆ ವಾರದಲ್ಲಿ ಒಂದು ದಿನ ಬಿಡಾರ ಬಂದ್ ಇರಲಿದೆ. ಹೀಗಾಗಿ ಪ್ರತಿ ಬುಧವಾರ ಸಾರ್ವಜನಿಕರ ಪ್ರವೇಶಕ್ಕೆ ಅವಕಾಶವಿರುವುದಿಲ್ಲ ಎಂದು ವನ್ಯಜೀವಿ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ತಿಳಿಸಿದ್ದಾರೆ.