ಶಿವಮೊಗ್ಗದಲ್ಲಿ ಟೀಮ್‌ ಇಂಡಿಯಾ ಮಾಜಿ ಕ್ರಿಕೆಟಿಗ ವೆಂಕಟೇಶ ಪ್ರಸಾದ್‌, ಏನಂದ್ರು?

ಶಿವಮೊಗ್ಗ: ಕ್ರಿಕೆಟ್‌ ತರಬೇತಿ ಚಟುವಟಿಕೆ ಬೆಂಗಳೂರಿಗೆ ಸೀಮಿತಗೊಳಿಸದೇ ವಲಯ ಮಟ್ಟಕ್ಕೂ ವಿಸ್ತರಿಸುವ ಆಶಯ ಹೊಂದಿದ್ದು, ಬೆಂಗಳೂರನ್ನು ಹೊರತುಪಡಿಸಿ ರಾಜ್ಯದಲ್ಲೇ ಮೊದಲ ಬಾರಿಗೆ ಶಿವಮೊಗ್ಗದಲ್ಲಿ ಒಳಾಂಗಣ ಕ್ರೀಡಾಂಗಣದ ವ್ಯವಸ್ಥೆ ಮಾಡಲಾಗುತ್ತಿದೆ ಎಂದು ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ (ಕೆಎಸ್‌ಸಿಎ) ಅಧ್ಯಕ್ಷ ಬಿ.ಕೆ. ವೆಂಕಟೇಶ ಪ್ರಸಾದ್ ತಿಳಿಸಿದರು.

ನಗರದ ನವುಲೆಯ ಕೆಎಸ್‌ಸಿಎ ಕ್ರೀಡಾಂಗಣದಲ್ಲಿ ಒಳಾಂಗಣ ತರಬೇತಿ ಕ್ರೀಡಾಂಗಣ ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರವೇರಿಸಿ ಅವರು ಮಾತನಾಡಿದರು. ಶೀಘ್ರದಲ್ಲೇ ಹುಬ್ಬಳ್ಳಿ ಹಾಗೂ ಮೈಸೂರಿಗೂ ಈ ಸೌಲಭ್ಯವನ್ನು ವಿಸ್ತರಿಸಲಾಗುವುದು. ಹಾಸನ, ಗದಗ, ದಾವಣಗೆರೆ ಹಾಗೂ ತುಮಕೂರಿನಲ್ಲೂ ಕ್ರೀಡಾಂಗಣಗಳ ಅಭಿವೃದ್ಧಿಗೆ ಈಗಾಗಲೇ ಪ್ರಕ್ರಿಯೆ ಆರಂಭಿಸಲಾಗಿದೆ ಎಂದರು.

KSCA-President-Venkatesh-Prasad-visits-Shivamogga-Stadium

ಬೆಂಗಳೂರು ಕೇಂದ್ರಿತವಾಗಿರುವ ಸ್ಯಾಟಲೈಟ್ ಅಕಾಡೆಮಿಯನ್ನು ವಲಯ ಕೇಂದ್ರಗಳಲ್ಲೂ ಸ್ಥಾಪಿಸುವ ಉದ್ದೇಶವಿದೆ. ವಲಯ ಕೇಂದ್ರಗಳಿಂದ ಆಟಗಾರರ ಪ್ರಾತಿನಿಧ್ಯ ಹೆಚ್ಚಿನ ಪ್ರಮಾಣದಲ್ಲಿ ರಾಜ್ಯ ಹಾಗೂ ರಾಷ್ಟ್ರೀಯ ತಂಡಗಳಿಗೆ ಆಗುತ್ತಿಲ್ಲ. ಆಟಗಾರರು ತಮ್ಮ ಕಂಫರ್ಟ್ ಜೋನ್‌ನಿಂದ ಹೊರಬರಬೇಕಿದೆ. ಶಿವಮೊಗ್ಗದ ಕ್ರಿಕೆಟ್‌ ಆಟಗಾರ ಎಸ್.ಎಲ್. ಅಕ್ಷಯ್ ಉತ್ತಮ ಸಾಧನೆ ಮಾಡುತ್ತಿದ್ದರು ಎಂದರು.

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಸಂಸದ ಬಿ.ವೈ. ರಾಘವೇಂದ್ರ, ಶಿವಮೊಗ್ಗಕ್ಕೆ ಒಳಾಂಗಣ ಕ್ರೀಡಾಂಗಣದ ಅವಶ್ಯಕತೆ ಇತ್ತು. ಅಮೃತ್-2 ಯೋಜನೆಯಡಿ ನವುಲೆ ಕೆರೆ ಅಭಿವೃದ್ಧಿಯಾಗುತ್ತಿದ್ದು, ಇದು ಕ್ರೀಡಾಂಗಣಕ್ಕೆ ಮತ್ತಷ್ಟು ಮೆರುಗು ನೀಡಲಿದೆ. ಸುಸಜ್ಜಿತ ಹೆದ್ದಾರಿ, ರೈಲ್ವೆ ಹಾಗೂ ವಿಮಾನ ಸಂಪರ್ಕ ನೆರವಾಗುವುದರಿಂದ ಮುಂಬರುವ ದಿನಗಳಲ್ಲಿ ಶಿವಮೊಗ್ಗ ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಉತ್ತಮ ವೇದಿಕೆಯಾಗಲಿದೆ ಎಂದರು.

ಕೆಎಸ್‌ಸಿಎ ವಲಯ ನಿರ್ದೇಶಕ ಡಿ.ಎಸ್. ಅರುಣ್ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ಕಾರ್ಯಕ್ರಮದಲ್ಲಿ ಶಾಸಕ ಎಸ್.ಎನ್. ಚನ್ನಬಸಪ್ಪ, ವಿಧಾನಪರಿಷತ್ ಸದಸ್ಯ ಮಂಜುನಾಥ ಭಂಡಾರಿ, ಕೆಎಸ್‌ಸಿಎ ಕಾರ್ಯದರ್ಶಿ ಸಂತೋಷ್ ಮೆನನ್, ಪದಾಧಿಕಾರಿಗಳಾದ ಅವಿನಾಶ್ ವೈದ್ಯ, ಬಿ.ಕೆ. ರವಿ, ಜಿಲ್ಲಾಧಿಕಾರಿ ಪ್ರಭುಲಿಂಗ ಕವಳಿಕಟ್ಟಿ, ಎಸ್‌ಪಿ ಬಿ.ನಿಖಿಲ್ ಹಾಗೂ ಸಿಇಒ ರಿಷಿ ಭಾಗವಹಿಸಿದ್ದರು.