ಶಿವಮೊಗ್ಗ: ನವರಾತ್ರಿ ಹಾಗೂ ದಸರಾ ಉತ್ಸವದ ಸಂದರ್ಭ ವಿದ್ಯುತ್ ಅವಘಡಗಳನ್ನು ತಡೆಯಲು ಮಂಗಳೂರು ವಿದ್ಯುತ್ ಸರಬರಾಜು ಕಂಪನಿ ನಿಯಮಿತ (ಮೆಸ್ಕಾಂ) ಮುಂಜಾಗ್ರತಾ ಮಾರ್ಗಸೂಚಿ ಬಿಡುಗಡೆ ಮಾಡಿದೆ.
ಹಬ್ಬದ ಸಂದರ್ಭ ವಿದ್ಯುತ್ ಮಾರ್ಗಗಳಿಂದ ಅನಧಿಕೃತವಾಗಿ ಸಂಪರ್ಕ ಪಡೆಯುವುದನ್ನು ನಿಷೇಧಿಸಲಾಗಿದೆ. ಸಾರ್ವಜನಿಕರು ಆಯಾ ವ್ಯಾಪ್ತಿಯ ಮೆಸ್ಕಾಂ ಉಪವಿಭಾಗ ಅಥವಾ ಶಾಖಾ ಕಚೇರಿಗೆ ತೆರಳಿ ಕಡ್ಡಾಯವಾಗಿ ಅನುಮತಿ ಪಡೆಯಬೇಕು. ದೇವತಾ ವಿಗ್ರಹಗಳನ್ನು ಪ್ರತಿಷ್ಠಾಪಿಸುವ ಸ್ಥಳದ ಸುತ್ತಮುತ್ತ ಯಾವುದೇ ವಿದ್ಯುತ್ ಮಾರ್ಗಗಳಿಲ್ಲದಿರುವುದನ್ನು ಆಯೋಜಕರು ಖಚಿತಪಡಿಸಿಕೊಳ್ಳಬೇಕು. ವಿದ್ಯುತ್ ಕಂಬಗಳು ಹಾಗೂ ಪರಿವರ್ತಕಗಳಿಗೆ ಬ್ಯಾನರ್ ಅಥವಾ ಫ್ಲೆಕ್ಸ್ ಕಟ್ಟುವುದು ಅಪರಾಧ.

ವಿದ್ಯುತ್ ಮಾರ್ಗಗಳ ಕೆಳಗೆ ಹಾಗೂ ಅಕ್ಕಪಕ್ಕ ಪೆಂಡಾಲ್ ಅಥವಾ ಶಾಮಿಯಾನ ಹಾಕಬಾರದು. ಸುರಕ್ಷಿತ ಅಂತರ ಕಾಯ್ದುಕೊಂಡು ಪೆಂಡಾಲ್ ನಿರ್ಮಿಸಬೇಕು. ಇನ್ನು ವಿಗ್ರಹ ವಿಸರ್ಜನಾ ಮೆರವಣಿಗೆಯ ವಾಹನಗಳಲ್ಲಿ ವಿದ್ಯುತ್ ತಂತಿಗಳಿಗೆ ತಾಗುವಷ್ಟು ಎತ್ತರದ ಧ್ವಜ ಅಥವಾ ಅಲಂಕಾರಿಕ ವಸ್ತುಗಳನ್ನು ಬಳಸುವುದು ಅಪಾಯಕಾರಿ. ವಿಸರ್ಜನಾ ಮೆರವಣಿಗೆ ಸಾಗುವ ರಸ್ತೆಗಳಲ್ಲಿ ವಿದ್ಯುತ್ ಮಾರ್ಗಗಳಿಂದ ಅಡಚಣೆ ಇದ್ದರೆ ತಕ್ಷಣ ಮೆಸ್ಕಾಂ ಗಮನಕ್ಕೆ ತರಬೇಕು. ಇಂತಹ ರಸ್ತೆಗಳಲ್ಲಿ ಮೆರವಣಿಗೆ ಸಾಗುವ ವೇಳೆ ತಾತ್ಕಾಲಿಕವಾಗಿ ವಿದ್ಯುತ್ ಸರಬರಾಜು ಸ್ಥಗಿತಗೊಳಿಸಿ ಅನುಕೂಲ ಮಾಡಿಕೊಡಲು ಸಂಸ್ಥೆ ಸಿದ್ಧವಿದೆ.
ಯಾವುದೇ ವಿದ್ಯುತ್ ಅವಘಡ ಸಂಭವಿಸಿದರೆ ತುರ್ತು ಸಹಾಯಕ್ಕಾಗಿ 8277883388, 0824-2950953 ಅಥವಾ ಮೆಸ್ಕಾಂ ಸಹಾಯವಾಣಿ 1912 ಗೆ ಸಂಪರ್ಕಿಸಬಹುದು ಎಂದು ತಿಳಿಸಲಾಗಿದೆ.